ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಮೂರು ದಿನಗಳ ಗಡುವು ನೀಡಿರುವುದಾಗಿ ತಿಳಿಸಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಇರಾನ್ ತೈಲ ರಫ್ತು ಮಾಡಲು ಸಾಧ್ಯವಾಗದ ಸ್ಥಿತಿ ಮುಂದುವರಿದರೆ ತೈಲ ಪೈಪ್ಲೈನ್‌ಗಳಲ್ಲಿ ಒತ್ತಡ ಹೆಚ್ಚಾಗಿ ಅವು ಒಳಗಿನಿಂದಲೇ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕ ನೌಕಾಪಡೆಯ ದಿಗ್ಬಂಧನದ ಪರಿಣಾಮ ಇರಾನ್ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತುಬಿಟ್ಟರೆ ಪೈಪ್ಲೈನ್‌ಗಳಲ್ಲಿ ಅತಿಯಾದ ಒತ್ತಡ ಉಂಟಾಗಿ ಅವು ತಾಂತ್ರಿಕವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಟ್ರಂಪ್ ವಿವರಿಸಿದರು.
ಇಂತಹ ಹಾನಿ ಸಂಭವಿಸಿದರೆ ಪೈಪ್ಲೈನ್‌ಗಳನ್ನು ಮರುಸ್ಥಾಪಿಸುವುದು ಕಷ್ಟವಾಗುತ್ತದೆ. ಇದರಿಂದ ಇರಾನ್ ತನ್ನ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಭಾಗವನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಪಾಕಿಸ್ತಾನದ ಮೂಲಕ ಹೊಸ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಅಮೆರಿಕ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡರೆ, ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಇರಾನ್ ಸೂಚಿಸಿದೆ.
ಆದರೆ ಅಮೆರಿಕದ ನಿಯಮಗಳಿಗೆ ಇರಾನ್ ಒಪ್ಪದಿದ್ದರೆ ಯಾವುದೇ ಪ್ರಸ್ತಾವನೆಗಳು ಸ್ವೀಕಾರಾರ್ಹವಾಗುವುದಿಲ್ಲ ಎಂಬ ಕಠಿಣ ನಿಲುವು ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಇರಾನ್ ತನ್ನ ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ತನ್ನ ಬಳಿ ಇರುವ ಶೇ. 60ರಷ್ಟು ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹವನ್ನು ಅಮೆರಿಕಕ್ಕೆ ಅಥವಾ ಮೂರನೇ ದೇಶಕ್ಕೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನು ಅಮೆರಿಕ ಮುಂದಿರಿಸಿದೆ.



