ಟೋಕಿಯೊ: ಉತ್ತರ ಜಪಾನ್‌ನಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಹಿನ್ನೆಲೆ 3 ಮೀಟರ್ ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಕಂಪವು ಇವಾಟೆ ಪ್ರಾಂತ್ಯ ಕರಾವಳಿಯ ಪೆಸಿಫಿಕ್ ಸಮುದ್ರ ಭಾಗದಲ್ಲಿ ಸಂಜೆ 4:53ರ ಸುಮಾರಿಗೆ ಸಂಭವಿಸಿದೆ. ಇದರ ಪ್ರಭಾವ ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊ ವರೆಗೂ ಕಂಡುಬಂದಿದ್ದು, ಎತ್ತರದ ಕಟ್ಟಡಗಳು ಕಂಪಿಸಿದವು.
ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ಅಪ್ಪಳಿಸುವ ಸಾಧ್ಯತೆ ಇರುವುದರಿಂದ, ಜನರು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲೆಗಳಿಂದ ಹಾನಿ ಸಂಭವಿಸುವ ಭೀತಿ ವ್ಯಕ್ತವಾಗಿದೆ.
ಜಪಾನ್ ವಿಶ್ವದ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ರಿಂಗ್ ಆಫ್ ಫೈರ್ ಪ್ರದೇಶದ ಪಶ್ಚಿಮ ಅಂಚಿನಲ್ಲಿ ನೆಲೆಗೊಂಡಿದೆ. ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಗಮ ಭಾಗದಲ್ಲಿರುವುದರಿಂದ ಇಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ.
ಸುಮಾರು 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 1,500 ಭೂಕಂಪಗಳು ದಾಖಲಾಗುತ್ತವೆ. ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಸುಮಾರು 18% ಇಲ್ಲಿ ಸಂಭವಿಸುತ್ತವೆ.
2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ್ದ 9.0 ತೀವ್ರತೆಯ ಭೂಕಂಪ ಮತ್ತು ಅದರ ಪರಿಣಾಮದ ಸುನಾಮಿ ಸುಮಾರು 18,500 ಜನರ ಜೀವ ಹಾನಿಗೆ ಕಾರಣವಾಗಿತ್ತು.



