ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಭಾರೀ ಗಲಾಟೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡಿಸುತ್ತಿದ್ದ ವೇಳೆ, ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟ್ ಬೆಂಬಲಿಗರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ಪರಸ್ಪರ ನಿಂದನೆ ನಡೆಯುತ್ತಿದ್ದಂತೆಯೇ ಗಲಾಟೆ ತೀವ್ರಗೊಂಡು, ಸ್ವಾಮೀಜಿ ಬೆಂಬಲಿಗರು ವಿಜಯನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಶಿವನಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಲಾಟೆ, ಧಿಕ್ಕಾರ ಘೋಷಣೆಗಳ ನಡುವೆಯೇ ಉಮಾಪತಿ ಲೆಕ್ಕ ಮಂಡನೆ ಮುಂದುವರಿಸಿದರು.
2008ರಿಂದ 2026ರವರೆಗಿನ ಲೆಕ್ಕಾಚಾರವನ್ನು ಬಹಿರಂಗಪಡಿಸಿದ ಅವರು, ಭಕ್ತರಿಂದ ಬಂದ ಕಾಣಿಕೆ ಹಾಗೂ ಸರ್ಕಾರದ ಅನುದಾನ ಸೇರಿ ಒಟ್ಟು 27 ಕೋಟಿ 61 ಲಕ್ಷ 51 ಸಾವಿರ 518 ರೂಪಾಯಿ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮಠದ ಅಭಿವೃದ್ಧಿ ಹಾದಿ ಕುರಿತು ಮಾತನಾಡಿದ ಉಮಾಪತಿ, “ಮಾಜಿ ಸಚಿವ ದಿವಂಗತ ಶಿವಪ್ಪ ಅವರು ಪಡೆಯಲು ಯತ್ನಿಸಿದ್ದ ಜಮೀನನ್ನು ಮಠವೇ ಹಣ ನೀಡಿ ಖರೀದಿಸಿದೆ. ಆದರೆ ಅದನ್ನು ದಾನವಾಗಿ ನೀಡಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ,” ಎಂದು ಸ್ಪಷ್ಟಪಡಿಸಿದರು.
ಲೆಕ್ಕ ಕೇಳುವ ಅಭಿಯಾನ ಕುರಿತು ಕಿಡಿಕಾರಿದ ಅವರು, “ಇಷ್ಟು ವರ್ಷಗಳ ಕಾಲ ಲೆಕ್ಕ ಕೇಳದವರು ಈಗ ಕೇಳುತ್ತಿದ್ದಾರೆ. ನಾವು ಪ್ರತಿವರ್ಷವೂ ಲೆಕ್ಕ ನೀಡುತ್ತಿದ್ದೇವೆ. ಇದು ಸ್ವಾಮೀಜಿಗಳ ತಪ್ಪನ್ನು ಮರೆಮಾಚಿಸುವ ಪ್ರಯತ್ನ,” ಎಂದು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.



