ಬೆಂಗಳೂರು: ಬೆಂಗಳೂರು ಮಹಾನಗರ ಆಡಳಿತ ಸಂಸ್ಥೆ (ಜಿಬಿಎ) ಇ-ಖಾತಾ ಸೇವೆಗೆ ಸಂಬಂಧಿಸಿದಂತೆ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ.
ಇನ್ಮುಂದೆ ಇ-ಖಾತಾ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಹೊಸ ವ್ಯವಸ್ಥೆಯ ಪ್ರಕಾರ, ನಾಗರಿಕರು ತಮ್ಮ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆಸ್ತಿ ತೆರಿಗೆ ಐಡಿ ಬಳಸಿ ಈ ಸೇವೆಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆಯನ್ನು ಜಿಬಿಎ ಜಾರಿಗೆ ತಂದಿದೆ.
ಕಳೆದ ಎರಡು ದಿನಗಳ ಹಿಂದೆ ಈ ಆನ್ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಸುಮಾರು 13 ಲಕ್ಷ ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ. ಇದರಿಂದ ಆಡಳಿತಾತ್ಮಕ ವಿಳಂಬ ಹಾಗೂ ಕಚೇರಿ ಅಡೆತಡೆಗಳನ್ನು ಕಡಿಮೆ ಮಾಡುವ ಗುರಿ ಇಡಲಾಗಿದೆ.
ಇ-ಖಾತಾ ಡೌನ್ಲೋಡ್ ಮಾಡುವ ವಿಧಾನ:
- https://bbmpeaasthi.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಬೇಕು
- ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಮಾಡಬೇಕು
- SAS ಅಪ್ಲಿಕೇಶನ್ ಅಥವಾ ಆಸ್ತಿ ತೆರಿಗೆ ಐಡಿ ನಮೂದಿಸಬೇಕು
- ತಕ್ಷಣವೇ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು
ಜಿಬಿಎ ಪ್ರಕಾರ, ಈ ವ್ಯವಸ್ಥೆಯಿಂದ ಮಾಲೀಕರ ಹೆಸರನ್ನು ಹುಡುಕುವ ಸಂಕೀರ್ಣ ಪ್ರಕ್ರಿಯೆ ಕಡಿಮೆಯಾಗಲಿದೆ. ಯಾವುದೇ ಸಮಯದಲ್ಲೂ ಆನ್ಲೈನ್ ಮೂಲಕ ಸೇವೆ ಲಭ್ಯವಾಗಲಿದೆ.
ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಡೌನ್ಲೋಡ್ ಲಿಂಕ್ ಕಳುಹಿಸಲಾಗುತ್ತದೆ. ನಗರ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಇದೇ ವೇಳೆ ಅಧಿಕಾರಿಗಳು ಮಧ್ಯವರ್ತಿಗಳ ಸಹಾಯವನ್ನು ತಪ್ಪಿಸಿ, ನಾಗರಿಕರು ಕೇವಲ ಅಧಿಕೃತ ಆನ್ಲೈನ್ ವ್ಯವಸ್ಥೆಯನ್ನೇ ಬಳಸುವಂತೆ ಮನವಿ ಮಾಡಿದ್ದಾರೆ.



