ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಚನಾನಂದ ಶ್ರೀಗಳ ಬದಲು ಪೀಠಾಧಿಪತಿಯಾಗಿ ನಾನು ಬರಬೇಕೇ ಎಂಬುದು ಭಕ್ತರು ಮತ್ತು ಟ್ರಸ್ಟಿಗಳ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಮನಗುಳಿ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಪೀಠದ ವಿವಾದದ ಹಿನ್ನೆಲೆಯಲ್ಲಿ ಹರಿಹರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದೆ ಸಹ ವಚನಾನಂದ ಸ್ವಾಮೀಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಹರಜಾತ್ರೆ ಸಂದರ್ಭದಲ್ಲಿ ಗಣ್ಯರಿಗೆ ಅವಮಾನ ಮಾಡಿದ್ದಾರೆ ಹಾಗೂ ಭಕ್ತರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.
ಸಮಾಜ ದೊಡ್ಡದಾಗಿದೆ, ಈ ಭಾಗದಲ್ಲಿ ನನಗೂ ಅಪಾರ ಭಕ್ತ ಸಮೂಹವಿದ್ದು, ಪೀಠಾಧಿಪತಿಯಾಗಿ ನೇಮಕವಾಗುವ ಪ್ರಶ್ನೆಯನ್ನು ಭಕ್ತರು ಹಾಗೂ ಟ್ರಸ್ಟಿಗಳು ತೀರ್ಮಾನಿಸಬೇಕು ಎಂದು ಹೇಳಿದರು.
ಇದರ ನಡುವೆ, ಈ ವಾರದೊಳಗೆ ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ತೆರವುಗೊಳಿಸುವ ಕುರಿತು ಟ್ರಸ್ಟಿಗಳು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕಪತ್ರ ಮಂಡನೆ ಮಾಡಿದ ಬಳಿಕ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿದೆ.
ಪೀಠದ ಆಡಳಿತದಲ್ಲಿ ಬದಲಾವಣೆ ತರಲು ಕಾನೂನು ಹೋರಾಟಕ್ಕೂ ಟ್ರಸ್ಟಿಗಳು ಮುಂದಾಗಿರುವ ಸೂಚನೆಗಳು ದೊರಕಿವೆ. ವಚನಾನಂದ ಸ್ವಾಮೀಜಿ ನಂತರ ಮನಗುಳಿ ಸಂಗನಬಸವ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸುವ ಬಗ್ಗೆ ಅಂತಿಮ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.



