ನವದೆಹಲಿ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಗಳಿಗೆ ಕಡಿವಾಣ ಹಾಕಲು ಮೇಟಾ ಒಡೆತನದ ವಾಟ್ಸಪ್ ಕಂಪನಿಯು ಕಳೆದ 12 ವಾರಗಳಲ್ಲಿ 9,400 ಖಾತೆಗಳನ್ನು ನಿಷೇಧಗೊಳಿಸಿದೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಮೋಸಗಳ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆ ವೇಳೆ ಈ ಮಾಹಿತಿ ನೀಡಲಾಗಿದೆ. ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ವಾಟ್ಸಪ್ ಸಲ್ಲಿಸಿದ ವರದಿಯನ್ನು ಅಟಾರ್ನಿ ಜನರಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಹಾಗೂ ದೂರಸಂಪರ್ಕ ಇಲಾಖೆ (DoT)ಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ವಾಟ್ಸಪ್ ಈ ಕ್ರಮ ಕೈಗೊಂಡಿದೆ.
ಮೋಸಗಾರರು “ದೆಹಲಿ ಪೊಲೀಸ್”, “ಮುಂಬೈ HQ”, “CBI”, “ATS Department” ಮುಂತಾದ ಹೆಸರನ್ನು ಬಳಸಿ, ಅಧಿಕೃತ ಲೋಗೋಗಳನ್ನು ಪ್ರೊಫೈಲ್ ಚಿತ್ರಗಳಾಗಿ ಇಟ್ಟುಕೊಂಡು ಜನರನ್ನು ಬೆದರಿಸುತ್ತಿದ್ದರು. ನಕಲಿ ಸಹಿ ಮತ್ತು ಸೀಲ್ಗಳ ಮೂಲಕ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಸರ್ಕಾರಿ ಏಜೆನ್ಸಿಗಳು ಗುರುತಿಸಿದ ಸುಮಾರು 3,800ಕ್ಕೂ ಹೆಚ್ಚು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 9,400 ಖಾತೆಗಳು ನಿಷೇಧಗೊಳಿಸಲಾಗಿದೆ.
ವಾಟ್ಸಪ್ ಲೋಗೋ ಮ್ಯಾಚಿಂಗ್ ಸಿಸ್ಟಮ್, ಡಿಸ್ಪ್ಲೇ ನೇಮ್ ಲಾಗಿಂಗ್ ಮತ್ತು ಸ್ಕ್ಯಾಮ್ ಪ್ಯಾಟರ್ನ್ ಗುರುತಿಸುವ ತಂತ್ರಜ್ಞಾನಗಳ ಸಹಾಯದಿಂದ ಈ ವಂಚನೆ ಜಾಲವನ್ನು ಪತ್ತೆಹಚ್ಚಿದೆ. ಪ್ರತಿ ಪ್ರಕರಣವನ್ನು ವಿಶ್ಲೇಷಿಸಿ ಸಂಪೂರ್ಣ ಕ್ರೈಮ್ ನೆಟ್ವರ್ಕ್ ಅನ್ನು ಗುರುತಿಸಿ ಅಳಿಸುವ ಕ್ರಮ ಮುಂದುವರಿಯುತ್ತಿದೆ ಎಂದು ಕಂಪನಿ ತಿಳಿಸಿದೆ.
ಇದಲ್ಲದೆ, ಡಿಜಿಟಲ್ ಅರೆಸ್ಟ್ ಮೋಸಗಳನ್ನು ತಡೆಯಲು ಹೊಸ ನಿಯಮಗಳು ಮತ್ತು ವೈಶಿಷ್ಟ್ಯಗಳನ್ನು ಜಾರಿಗೆ ತರಲಾಗುತ್ತಿದೆ. ಹೊಸದಾಗಿ ಸೃಷ್ಟಿಸಿದ ಅಥವಾ ಅವಧಿ ಮೀರಿದ ಖಾತೆಗಳಿಂದ ಕರೆ ಬಂದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಪರಿಚಯಿಸುವ ಕುರಿತು ಚಿಂತನೆ ನಡೆದಿದೆ. ಅನುಮಾನಾಸ್ಪದ ಸಿಮ್ ಕಾರ್ಡ್ಗಳನ್ನು ಗುರುತಿಸಿದ ಕೆಲವೇ ಗಂಟೆಗಳಲ್ಲಿ ನಿರ್ಬಂಧಿಸುವ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.



