ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಹಾಲಿನ ದರ ಹೆಚ್ಚಳವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಮಾಸ್ಟರ್ಸ್ಟ್ರೋಕ್ ಎಂದು ಬಣ್ಣಿಸುವ ಬಿಜೆಪಿಯವರು, ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ದರ ಹೆಚ್ಚಿಸಿದರೆ ಜನಸಾಮಾನ್ಯರ ಮೇಲೆ ಬರೆ ಎಂದು ಆರೋಪಿಸುತ್ತಿದ್ದಾರೆ. ಮೋದಿ ಮಾಡಿದರೆ ಮಾಸ್ಟರ್ಸ್ಟ್ರೋಕ್, ನಾವು ರಾಜ್ಯ ಕಟ್ಟಬಾರದಾ ಎಂದು ಪ್ರಶ್ನಿಸಿದ್ದಾರೆ.
ನಂದಿನಿ ಹಾಲಿನ ಪರಿಷ್ಕೃತ ದರ ಜಾರಿಯಾದ ಬೆನ್ನಲ್ಲೇ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಲವು ವರ್ಷಗಳಿಂದ ಹಾಲಿನ ದರ ಹೆಚ್ಚಳ ಮಾಡಿರಲಿಲ್ಲ. ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ದರ ಏರಿಕೆಯನ್ನು ಮುಂದೂಡುತ್ತಾ ಬಂದಿತ್ತು. ಆದರೆ ಹೈನುಗಾರಿಕೆಯ ವೆಚ್ಚ ಹೆಚ್ಚಾಗಿರುವುದರಿಂದ ರೈತರ ಹಿತದೃಷ್ಟಿಯಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹಾಲು ಉತ್ಪಾದನೆಗೆ ತಗಲುವ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಹೈನುಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಹಾಲಿನ ದರ ಹೆಚ್ಚಿಸುವಂತೆ ರೈತ ಸಂಘಟನೆಗಳು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದವು. ರೈತರನ್ನು ಉಳಿಸುವುದು ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂಬುದನ್ನು ಮೊದಲು ಪರಿಶೀಲಿಸಲಿ. ನಂತರ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಟೀಕೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ಸಚಿವರು, ಗ್ರಾಹಕ ಬೆಲೆ ಸೂಚ್ಯಂಕ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ ಅಕ್ಕಿ, ಗೋಧಿ, ಬೇಳೆಕಾಳು ಹಾಗೂ ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣವೇ ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾದಾಗ ದೇಶಕ್ಕಾಗಿ ಹಣ ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡ ಬಿಜೆಪಿಯವರು, ಈಗ ಹಾಲಿನ ದರ ಏರಿಕೆ ವಿಚಾರದಲ್ಲಿ ಜನಸಾಮಾನ್ಯರ ಪರ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನೆಪವೊಡ್ಡಿ ತೈಲ ಬೆಲೆ ಹೆಚ್ಚಿಸಲಾಗಿತ್ತು. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ಏಕೆ ವರ್ಗಾಯಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಬೇಕು. ಇಂಧನ ದರ ಇಳಿಕೆಯಾದರೆ ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.









