ಕೋಲಾರ: ಆರ್ಡರ್ ಇದೆ ಎಂದು ನಂಬಿಸಿ ಕರೆದುಕೊಂಡು ಹೋಗಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ.
ಬೀಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (26) ಮೃತ ಯುವಕನಾಗಿದ್ದಾನೆ. ಸೋಫಾ ತಯಾರಿಕೆ ಹಾಗೂ ರಿಪೇರಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಪಾಷಾ ಅವರನ್ನು ನಿನ್ನೆ ರಾತ್ರಿ ಸುಮಾರು 11:30ರ ವೇಳೆಗೆ ಪರಿಚಯಸ್ಥರು ಮನೆಗೆ ಬಂದು “ಹೊಸ ಸೋಫಾ ಆರ್ಡರ್ ಬಂದಿದೆ, ಅಳತೆ ತೆಗೆದುಕೊಳ್ಳಲು ಬಾ” ಎಂದು ಹೇಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಅವರು ಎಪಿಎಂಸಿ ಮಾರುಕಟ್ಟೆ ಸಮೀಪದ ಮೆಹಬೂಬ್ ಪೆಟ್ರೋಲ್ ಬಂಕ್ ಬಳಿಯ ಲಕ್ಷ್ಮೀ ಬಾರ್ ಬಳಿ ಹೋಗಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಮತ್ತು ಆಟೋ ಚಾಲಕ ಅಬ್ದುಲ್ ರಶೀದ್ ನಡುವೆ ಗಲಾಟೆ ಆರಂಭವಾಗಿದೆ.
ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದ ಅಬ್ದುಲ್ ರಶೀದ್, ಏಕಾಏಕಿ ಸಲ್ಮಾನ್ ಮೇಲೆ ಕಲ್ಲಿನಿಂದ ದಾಳಿ ನಡೆಸಿ, ಬಳಿಕ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೊಲೆ ಮಾಡಿದ ಬಳಿಕ ಅದೇ ಸ್ಥಳದಲ್ಲಿ ಮತ್ತಿನಲ್ಲಿ ಬಿದ್ದಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
“ಮನೆಗೆ ಆಸರೆಯಾಗಿದ್ದ ಮಗನನ್ನು ಸುಳ್ಳು ಹೇಳಿ ಕರೆದುಕೊಂಡು ಹೋಗಿ ಕೊಂದಿದ್ದಾರೆ” ಎಂದು ಮೃತನ ತಂದೆ ಖಾದರ್ ಪಾಷಾ ಮತ್ತು ತಾಯಿ ಶಕೀಲಾ ಕಣ್ಣೀರಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಇಂತಹ ಘಟನೆಗಳು ಹೆಚ್ಚುತ್ತಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



