ಬೆಂಗಳೂರು: ಬುಧವಾರ ನಗರಾದ್ಯಂತ ಸುರಿದ ಭಾರೀ ಆಲಿಕಲ್ಲು ಮಳೆಯಿಂದ 10 ಮಂದಿ ಸಾವನ್ನಪ್ಪಿದ್ದು, ಹಲವು ಅವಾಂತರಗಳು ಸಂಭವಿಸಿವೆ. ಈ ನಡುವೆಯೇ ಇಂದು ಕೂಡ ಬೆಂಗಳೂರಿನಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಮೇ 1ರವರೆಗೆ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿರುವುದರಿಂದ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.
ಬೇಸಿಗೆಯ ಬಿಸಿಲಿಗೆ ಬೇಸತ್ತಿದ್ದ ಬೆಂಗಳೂರಿಗರಿಗೆ ಮಳೆ ತಂಪು ನೀಡಿದರೂ, ಅದರ ಅಬ್ಬರ ಭಾರೀ ಅನಾಹುತಗಳಿಗೆ ಕಾರಣವಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದು, ಪ್ರತ್ಯೇಕ ಘಟನೆಗಳಲ್ಲಿ ಇನ್ನೂ ಮೂವರು ಜೀವ ಕಳೆದುಕೊಂಡಿದ್ದಾರೆ.
ಧಾರಾಕಾರ ಮಳೆಯಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, 170ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಜೊತೆಗೆ 408 ಮರಗಳ ಕೊಂಬೆಗಳು ಮುರಿದು ಬಿದ್ದಿದ್ದು, ಅನೇಕ ಕಡೆ ಟ್ರಾಫಿಕ್ ಜಾಮ್ ಉಂಟಾಯಿತು.
ನಗರದ ಐದು ಪಾಲಿಕೆ ವ್ಯಾಪ್ತಿಗಳಲ್ಲಿನ 68 ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕಳೆದ 25 ವರ್ಷಗಳ ಬಳಿಕ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ದಾಖಲೆ ಮಳೆಯಾಗಿದೆ.



