ಚಿಕ್ಕೋಡಿ: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ನಡೆದಿದೆ.
ಸಂಗೀತಾ ಗಾಡಿವಡ್ಡರ (35) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗುರುತಿಸಲಾಗಿದೆ. ಮಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಗೀತಾ ಸುಮಾರು 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಅವರನ್ನು ವಿವಾಹವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ದಂಪತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದು, ಕೌಟುಂಬಿಕ ಕಲಹ ತೀವ್ರಗೊಂಡಿತ್ತು ಎನ್ನಲಾಗಿದೆ.
ಮಂಗಳವಾರ ರಾತ್ರಿ ಗಂಡನ ಕಿರುಕುಳವನ್ನು ತಾಳಲಾರದೆ ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತಳ ತಾಯಿ ನೀಡಿರುವ ದೂರಿನ ಪ್ರಕಾರ, ಮನೆ ಕಟ್ಟಿಕೊಳ್ಳಲು 2 ಲಕ್ಷ ರೂಪಾಯಿ ತವರು ಮನೆಯಿಂದ ತಂದುಕೊಡುವಂತೆ ವೆಂಕಟೇಶ್ ನಿರಂತರವಾಗಿ ಒತ್ತಡ ಹೇರುತ್ತಿದ್ದನು. ಹಣ ನೀಡದ ಹಿನ್ನೆಲೆಯಲ್ಲಿ ಸಂಗೀತಾಳಿಗೆ ಹಲ್ಲೆ ನಡೆಸಿ ಬಳಿಕ ನೇಣು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ಮಾಹಿತಿ ತಿಳಿದು ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



