ಬೆಂಗಳೂರು: ನಟ ಧನ್ವೀರ್ ಗೌಡ ಸುತ್ತ ವಿವಾದಗಳು ಮುಂದುವರಿದಿವೆ.
ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ಮೊದಲ ನೋಟಿಸ್ಗೆ ಧನ್ವೀರ್ ಸ್ಪಂದಿಸಿಲ್ಲ ಎನ್ನಲಾಗಿದ್ದು, ಇದೀಗ ಎರಡನೇ ನೋಟಿಸ್ ಜಾರಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದದ ನಡುವೆಯೇ, ಝೈದ್ ಖಾನ್ ಕುರಿತು ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಝೈದ್ ಖಾನ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಖುದ್ದಾಗಿ ಹಾಜರಾಗುವಂತೆ ಧನ್ವೀರ್ ಅವರಿಗೆ ಮೊದಲ ನೋಟಿಸ್ ನೀಡಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಎರಡನೇ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಧನ್ವೀರ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ:
ಇನ್ನೊಂದೆಡೆ, ನಟ ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ಹಾಗೂ ಎಫ್ಐಆರ್ಗಳು ದಾಖಲಾಗಿವೆ ಎಂದು ವರದಿಯಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಒಟ್ಟಿನಲ್ಲಿ, ಝೈದ್ ಖಾನ್ ವಿರುದ್ಧ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಧನ್ವೀರ್ ಹಾಜರಾಗುತ್ತಾರೆಯೇ? ಎರಡನೇ ನೋಟಿಸ್ಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬುದು ಕುತೂಹಲ ಮೂಡಿಸಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.








