ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಸಾಮಾನ್ಯವಾಗಿರುವ ನಡುವೆಯೇ, ಸ್ಕ್ರೀನ್ ಟೈಮ್ ಹೆಚ್ಚಾದರೆ ಮಕ್ಕಳ ಮಾತಿನ ಬೆಳವಣಿಗೆಗೆ ಹಾನಿ ಉಂಟಾಗಬಹುದು ಎಂದು ಹೊಸ ಅಧ್ಯಯನವು ಎಚ್ಚರಿಸಿದೆ.
ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ನಡೆಸಿದ ಅಧ್ಯಯನದಲ್ಲಿ, ದಿನಕ್ಕೆ ಒಂದು ಗಂಟೆಗೂ ಹೆಚ್ಚು ಸ್ಕ್ರೀನ್ ಬಳಸುವ ಮಕ್ಕಳಲ್ಲಿ “ಸ್ಪೀಚ್ ಡಿಲೇ” ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಬಹಿರಂಗವಾಗಿದೆ. 18 ರಿಂದ 24 ತಿಂಗಳೊಳಗಿನ 140 ಆರೋಗ್ಯಕರ ಮಕ್ಕಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ.
ತಜ್ಞರ ಪ್ರಕಾರ, ಮಕ್ಕಳ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಗೆ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ನೇರ ಸಂವಹನದ ಮೂಲಕವೇ ಭಾಷಾ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ. ಆದರೆ ಸ್ಕ್ರೀನ್ ಬಳಕೆ ಹೆಚ್ಚಾದರೆ ಪೋಷಕರೊಂದಿಗೆ ಸಂಭಾಷಣೆ ಕಡಿಮೆಯಾಗುವುದರಿಂದ ಮಾತನಾಡುವ ಸಾಮರ್ಥ್ಯ ನಿಧಾನಗೊಳ್ಳಬಹುದು.
ಅಧ್ಯಯನವು ಮತ್ತೊಂದು ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದು, 18 ತಿಂಗಳಿಗಿಂತ ಮುಂಚೆ ಸ್ಕ್ರೀನ್ ಬಳಸುವ ಮಕ್ಕಳಲ್ಲಿ ಮಾತಿನ ವಿಳಂಬ ಹೆಚ್ಚು ಕಂಡುಬಂದಿದೆ. ಈ ಹಿನ್ನೆಲೆ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ಸಂಪೂರ್ಣವಾಗಿ ತಪ್ಪಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.
ಮಕ್ಕಳ ಭಾಷಾ ಬೆಳವಣಿಗೆಗೆ ಪೋಷಕರು ಹೆಚ್ಚಿನ ಸಮಯವನ್ನು ಮೀಸಲಿಟ್ಟು, ಅವರೊಂದಿಗೆ ಮಾತನಾಡುವುದು, ಕಥೆ ಹೇಳುವುದು ಮತ್ತು ಆಟಗಳಲ್ಲಿ ತೊಡಗಿಸುವುದು ಅತ್ಯಂತ ಪರಿಣಾಮಕಾರಿ ವಿಧಾನಗಳಾಗಿವೆ. ಅಗತ್ಯವಿದ್ದಲ್ಲಿ ಮಾತ್ರ, ಉದಾಹರಣೆಗೆ ವಿಡಿಯೋ ಕಾಲ್‌ಗಳಿಗೆ ಸ್ಕ್ರೀನ್ ಬಳಕೆಯನ್ನು ಮಿತಿಗೊಳಿಸುವುದು ಒಳಿತು ಎಂದು ತಜ್ಞರು ಸೂಚಿಸಿದ್ದಾರೆ.



