ಚಿಕ್ಕಬಳ್ಳಾಪುರ: ಮದುವೆಯಾದ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ. ಮೇ 15ರಂದು ವಿವಾಹ ವಾರ್ಷಿಕೋತ್ಸವ ಆಚರಣೆಗೆ ಸಿದ್ಧವಾಗಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.
ಮೃತಳನ್ನು ಗೌರಿಬಿದನೂರು ಮೂಲದ ಶಕುಂತಲಾ ಅವರ ಪುತ್ರಿ ಪ್ರೇಮಾ ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಶಿವಕುಮಾರ್ ಜೊತೆ ಸಂಬಂಧಿಕರ ಒಪ್ಪಿಗೆಯೊಂದಿಗೆ ಪ್ರೇಮಾ ವಿವಾಹವಾಗಿದ್ದರು. ಶಿವಕುಮಾರ್ ಪ್ರೇಮಾಳನ್ನು ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.
ಮದುವೆಯಾದ ಆರಂಭಿಕ ಮೂರು ತಿಂಗಳು ದಾಂಪತ್ಯ ಜೀವನ ಸುಖಕರವಾಗಿತ್ತು. ಆದರೆ ನಂತರ ಪ್ರೇಮಾಳ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಟ್ಯಾಟೂ ಇರುವುದನ್ನು ಗಮನಿಸಿದ ಶಿವಕುಮಾರ್ ಅನುಮಾನ ಪಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಅದು ಸ್ನೇಹಿತನ ಹೆಸರು ಮಾತ್ರ ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದರೂ, ಅದನ್ನೇ ನೆಪ ಮಾಡಿಕೊಂಡು ಪತಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಇದರ ಜೊತೆಗೆ ವರದಕ್ಷಿಣೆ ತರುವಂತೆ ಶಿವಕುಮಾರ್ ನಿರಂತರವಾಗಿ ಒತ್ತಡ ಹೇರಿ ಹಲ್ಲೆ ನಡೆಸುತ್ತಿದ್ದ ಎಂದು ಪ್ರೇಮಾಳ ತಾಯಿ ಶಕುಂತಲಾ ಗಂಭೀರ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನಡೆದ ಜಗಳದ ಹಿನ್ನೆಲೆಯಲ್ಲಿ ಪ್ರೇಮಾ ತವರು ಮನೆ ಸೇರಿದ್ದಳು. ಬಳಿಕ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ತಿಂಗಳೊಳಗೇ ಆಕೆ ಸಾವನ್ನಪ್ಪಿರುವುದು ಕುಟುಂಬದವರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿದ್ದು, ಆ ಸಂದರ್ಭದಲ್ಲೂ ಗಂಡನ ಮನೆಯವರು ನೋಡಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಶಿವಕುಮಾರ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.



