ದೊಡ್ಡಬಳ್ಳಾಪುರ: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಗೆ ಮುಂದಾಗಿದ್ದ ವರನ ಮದುವೆಯನ್ನು ಆತನ ಗರ್ಭಿಣಿ ಪತ್ನಿಯೇ ಮಂಟಪಕ್ಕೆ ಬಂದು ತಡೆದ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕುಮಾರ್ ಎಂಬ ಯುವಕ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾನೆ. ಸದ್ಯ ಆತನ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ಮೊದಲ ಮದುವೆಯ ವಿಷಯವನ್ನು ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಕುರಿತು ತಿಳಿದುಕೊಂಡ ಗರ್ಭಿಣಿ ಪತ್ನಿ, ತಡರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಮದುವೆ ಶಾಸ್ತ್ರ ಆರಂಭವಾಗುವ ಮುನ್ನವೇ ಅವರು ಕಲ್ಯಾಣ ಮಂಟಪಕ್ಕೆ ಪ್ರವೇಶಿಸಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ.
ತಮ್ಮ ಮದುವೆಯ ದಾಖಲೆಗಳು ಹಾಗೂ ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿ ನ್ಯಾಯಕ್ಕಾಗಿ ಅವರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಪೊಲೀಸರು ವರ ಕುಮಾರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಸೆಮಣೆ ಏರಬೇಕಿದ್ದ ವರ ಈಗ ಪೊಲೀಸ್ ವಶದಲ್ಲಿದ್ದು, ಎರಡನೇ ಮದುವೆಗೆ ಸಿದ್ಧವಾಗಿದ್ದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.



