ಚೆನ್ನೈ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ತ್ರಿಕೋನ ಸ್ಪರ್ಧೆ ಸ್ಪಷ್ಟವಾಗಿದ್ದು, ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಮುನ್ನಡೆ ಸಾಧಿಸಿದೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ಟಿವಿಕೆ, ಆರಂಭಿಕ ಹಂತದಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ದಾಪುಗಾಲಿಟ್ಟಿದೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಲಭ್ಯವಾದ ಮಾಹಿತಿಯ ಪ್ರಕಾರ, ಟಿವಿಕೆ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತಾರೂಢ ಡಿಎಂಕೆ 52 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತ್ತ ಎಐಎಡಿಎಂಕೆ ಮೈತ್ರಿಕೂಟ 79 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರೆ ಪಕ್ಷಗಳು ಒಂದು ಕ್ಷೇತ್ರದಲ್ಲಿ ಮುನ್ನಡೆ ದಾಖಲಿಸಿವೆ.
ಈ ಬಾರಿ ಆಡಳಿತಾರೂಢ ಡಿಎಂಕೆಗೆ ಭಾರೀ ಹಿನ್ನಡೆ ಎದುರಾಗಿರುವುದು ಗಮನ ಸೆಳೆದಿದೆ. ಡಿಎಂಕೆಯ ಭದ್ರಕೋಟೆ ಎಂದು ಪರಿಗಣಿಸಲಾದ ಉದಯನಿಧಿ ಸ್ಟಾಲಿನ್ ಪ್ರತಿನಿಧಿಸುವ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರದಲ್ಲೂ ಟಿವಿಕೆ ಮುನ್ನಡೆ ಸಾಧಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇನ್ನೊಂದೆಡೆ, ತಿರುಚಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಲ್ಲಿಯೂ ವಿಜಯ್ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ ಮತ ಎಣಿಕೆ ಪ್ರಕಾರ ಟಿವಿಕೆ 100 ಸ್ಥಾನಗಳ ಗಡಿ ದಾಟಿದ್ದು, ಬಹುಮತಕ್ಕೆ ಅಗತ್ಯವಿರುವ 118 ಸ್ಥಾನಗಳತ್ತ ಮುನ್ನಡೆಯುತ್ತಿದೆ.
ಪ್ರಸ್ತುತ ಎಐಎಡಿಎಂಕೆ ಎರಡನೇ ಸ್ಥಾನದಲ್ಲಿದ್ದು, ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸಮ್ಮಿಶ್ರ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



