HomeKarnataka Newsಪಿಂಚಣಿದಾರರನ್ನು ವಿಭಜಿಸುವುದು ಅಸಂವಿಧಾನಿಕ: ಹೈಕೋರ್ಟ್ ಮಹತ್ವದ ತೀರ್ಪು

ಪಿಂಚಣಿದಾರರನ್ನು ವಿಭಜಿಸುವುದು ಅಸಂವಿಧಾನಿಕ: ಹೈಕೋರ್ಟ್ ಮಹತ್ವದ ತೀರ್ಪು

For Dai;y Updates Join Our whatsapp Group

Spread the love

ಬೆಂಗಳೂರು: ನಿವೃತ್ತ ನೌಕರರನ್ನು ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಭಜಿಸುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 2005ರ ಜುಲೈ 1ಕ್ಕೂ ಮುನ್ನ ನಿವೃತ್ತರಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವಂತೆ ಆದೇಶಿಸಿದೆ.

ಕೆಪಿಸಿಎಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಪಿಂಚಣಿ ಪರಿಷ್ಕರಣೆಯಿಂದ ಸಂಸ್ಥೆಗೆ ಸುಮಾರು 250 ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂಬ ಕೆಪಿಸಿಎಲ್ ವಾದವನ್ನು ಪೀಠ ತಳ್ಳಿಹಾಕಿದೆ. ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದವರು ಬಾಕಿ ಮೊತ್ತದ ಹಕ್ಕನ್ನು ತ್ಯಜಿಸಿರುವುದರಿಂದ ಕೇವಲ 4 ಕೋಟಿ ರೂಪಾಯಿ ವೆಚ್ಚದಲ್ಲೇ ಈ ಸೌಲಭ್ಯ ನೀಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಡಿ.ಎಸ್. ನಕಾರಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪಿಂಚಣಿ ಪರಿಷ್ಕರಣೆಯ ಲಾಭವು ಎಲ್ಲ ನಿವೃತ್ತರಿಗೂ ಸಮಾನವಾಗಿ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ 2005 ಜುಲೈ 1ಕ್ಕೂ ಮುನ್ನ ನಿವೃತ್ತರಾದ ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ನೀಡಬೇಕು ಎಂದು ಸೂಚಿಸಿದೆ.

ಆದರೆ ಬಾಕಿ ಮೊತ್ತವನ್ನು ಏಕಸದಸ್ಯ ಪೀಠದ ತೀರ್ಪು ಬಂದ ದಿನಾಂಕದಿಂದಲೇ ಪಾವತಿಸಬೇಕು ಹಾಗೂ ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆಯಂತೆ, ಕೆಪಿಸಿಎಲ್ ಹೊರಡಿಸಿದ್ದ ಆದೇಶದಲ್ಲಿ 2005ರ ಜುಲೈ 1ರ ನಂತರ ನಿವೃತ್ತರಾದವರಿಗೆ ಮಾತ್ರ ಪರಿಷ್ಕೃತ ಪಿಂಚಣಿ ನೀಡಲಾಗುತ್ತಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಎಂ.ಎಸ್. ರಾಜೇಶ್ವರಿ ಸೇರಿದಂತೆ ಹಲವು ನಿವೃತ್ತರ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಏಕಸದಸ್ಯ ಪೀಠವು ಈ ಹಿಂದೆ ನಿವೃತ್ತಿ ದಿನಾಂಕ ಆಧರಿಸಿ ಪಿಂಚಣಿ ವಿಭಜನೆ ಮಾಡುವುದು ತಾರತಮ್ಯ ಎಂದು ಹೇಳಿ ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಪಿಸಿಎಲ್ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣದಲ್ಲಿ ಈಗ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!