ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಣಿ ಮುಂದುವರೆದಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ತಂಡ ಗೆಲುವು ಸಾಧಿಸಲು ವಿಫಲವಾಗಿದೆ. ಸೋಮವಾರ ನಡೆದ ಈ ಪಂದ್ಯದಲ್ಲಿ ಲಕ್ನೋ 228 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿದ್ದರೂ, ಜಯ ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದು ಲಕ್ನೋ ತಂಡದ ಒಟ್ಟು 9 ಪಂದ್ಯಗಳಲ್ಲಿ ಸತತ ಆರನೇ ಸೋಲಾಗಿದೆ. ಭರ್ಜರಿ ಆರಂಭದ ನಂತರವೂ ತಂಡದ ಪ್ರದರ್ಶನ ಕುಸಿತ ಕಂಡಿದ್ದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ತಂಡದ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದು, ಉತ್ತಮ ಆರಂಭವಿದ್ದರೂ ಮಧ್ಯಭಾಗದಲ್ಲಿ ವೇಗ ಕಳೆದುಕೊಂಡಿದ್ದು ಮುಖ್ಯ ಕಾರಣ ಎಂದು ಹೇಳಿದ್ದಾರೆ.
“ನಾವು ಆರಂಭಿಸಿದ ರೀತಿಯಲ್ಲಿ ನೋಡಿದರೆ ಇನ್ನಷ್ಟು ರನ್ ಗಳಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಹಲವಾರು ಪಾಸಿಟಿವ್ ಅಂಶಗಳೂ ಇವೆ. ಆಟಗಾರರು ಸ್ವಾತಂತ್ರ್ಯದಿಂದ ಆಡಿದರು. ಕೊನೆಯಲ್ಲಿ ಮುಂಬೈ ಬೌಲರ್ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ನಾವು ಅಂದುಕೊಂಡಿದ್ದಕ್ಕಿಂತ 10 ರಿಂದ 15 ರನ್ ಕಡಿಮೆಯಾದವು,” ಎಂದು ಪಂತ್ ಹೇಳಿದರು.
ಈ ಪಿಚ್ನಲ್ಲಿ 220 ರಿಂದ 230 ರನ್ ಗುರಿ ಸುರಕ್ಷಿತ ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ತಂಡಕ್ಕೆ ಸ್ವಲ್ಪ ಅದೃಷ್ಟವೂ ಬೇಕು ಎಂದು ಹೇಳಿದ ಅವರು, ಹೆಚ್ಚು ಪ್ರಯತ್ನವೂ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಮುಂಬೈ ವಿರುದ್ಧದ ಪಂದ್ಯದಲ್ಲಿ ನಿಕೋಲಸ್ ಪೂರನ್ (21 ಎಸೆತಗಳಲ್ಲಿ 63 ರನ್) ಹಾಗೂ ಮಿಚೆಲ್ ಮಾರ್ಷ್ (25 ಎಸೆತಗಳಲ್ಲಿ 44 ರನ್) ಸ್ಫೋಟಕ ಆರಂಭ ನೀಡಿದ್ದರು. ಕೇವಲ 8 ಓವರ್ಗಳಲ್ಲಿ ಲಕ್ನೋ 123/1 ರನ್ ಗಳಿಸಿ 300 ರನ್ ಗಡಿ ದಾಟುವ ಸಾಧ್ಯತೆ ತೋರಿಸಿತ್ತು.
ಆದರೆ ಕಾರ್ಬಿನ್ ಬಾಷ್ ಒಂದೇ ಓವರ್ನಲ್ಲಿ ಪೂರನ್ ಹಾಗೂ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ನಂತರ ನಾಯಕ ಪಂತ್ (15 ರನ್) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.
ಮುಂಬೈ ಪರ ರಿಕಲ್ಟನ್ (32 ಎಸೆತಗಳಲ್ಲಿ 83 ರನ್) ಮತ್ತು ರೋಹಿತ್ ಶರ್ಮಾ (44 ಎಸೆತಗಳಲ್ಲಿ 84 ರನ್) ಭರ್ಜರಿ ಆಟ ಆಡಿದ್ದು, 18.4 ಓವರ್ಗಳಲ್ಲಿ 229 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು.



