ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೈಕ್ ಕಳ್ಳರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶ ಮೂಲದ ಪ್ರಸಾದ್ ಹಾಗೂ ಕೋಲಾರದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ವಿರುದ್ಧ 8 ಪೊಲೀಸ್ ಠಾಣೆಗಳಲ್ಲಿ 45ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿಗಳು ಕದ್ದ ಬೈಕ್‌ಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ಸುಳಿವು ಹಿಡಿದು ತನಿಖೆ ಮುಂದುವರೆಸಿದ ಪೊಲೀಸರು, ದೊಡ್ಡ ಪ್ರಮಾಣದ ಬೈಕ್ ಕಳವು ಜಾಲವನ್ನು ಬಯಲಿಗೆಳೆದಿದ್ದಾರೆ. ಹೊಸಕೋಟೆ ಕ್ರೈಂ ಕಾನ್ಸ್ಟೇಬಲ್ ಗೋಪಾಲ್ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಎಸ್ಪಿ ಚಂದ್ರಕಾಂತ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ಗೋವಿಂದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಸಾಧನೆ ಸಾಧ್ಯವಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಘೋಷಿಸಿದೆ.



