HomeKarnataka Newsಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ: ಅರ್ಜಿ ವಿಚಾರಣೆ ಮೇ 26ಕ್ಕೆ ಮುಂದೂಡಿಕೆ

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ: ಅರ್ಜಿ ವಿಚಾರಣೆ ಮೇ 26ಕ್ಕೆ ಮುಂದೂಡಿಕೆ

For Dai;y Updates Join Our whatsapp Group

Spread the love

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ 15ನೇ ಅಪರಾಧಿ ವಿನಯ್ ಕುಲಕರ್ಣಿ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಹಾಗೂ ನ್ಯಾಯಮೂರ್ತಿ ರಾಜೇಶ್ ರೈ ಕೆ. ಅವರಿದ್ದ ವಿಭಾಗೀಯ ಪೀಠ ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿ, ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಮನವಿ ಮಾಡಿದರು. ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿತು.

ಇದೇ ಪ್ರಕರಣದಲ್ಲಿ 7 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಪೊಲೀಸ್ ವೃತ್ತ ನಿರೀಕ್ಷಕ ಚನ್ನಕೇಶವ ಟಿಂಗರೀಕರ್ ಪರ ವಕೀಲರು ಪ್ರತ್ಯೇಕ ಮನವಿ ಸಲ್ಲಿಸಿ, ಅವರ ವಿರುದ್ಧ ಜಾಮೀನು ನೀಡಬಹುದಾದ ಅಪರಾಧಗಳಷ್ಟೇ ಇರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ಕುರಿತು ವಾದ ಆಲಿಸಿದ ನ್ಯಾಯಪೀಠ, ಟಿಂಗರೀಕರ್ ಅವರ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬಹುದೆಂದು ಸೂಚಿಸಿ, ಅದನ್ನು ಮೇ 14ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಮ್‌ನಲ್ಲಿ ಬಿಜೆಪಿ ಮುಖಂಡ ಯೋಗೇಶ್‌ಗೌಡ ಹತ್ಯೆಗೀಡಾಗಿದ್ದರು. ಬೆಳಗ್ಗೆ ಜಿಮ್‌ನಲ್ಲಿ ಪತ್ರಿಕೆ ಓದುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಆರಂಭದಲ್ಲಿ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದರೆ ತನಿಖೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

2019ರಲ್ಲಿ ವಿನಯ್ ಕುಲಕರ್ಣಿ ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಯೋಗೇಶ್‌ಗೌಡ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು.

ಬಳಿಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ತನಿಖೆ ನಡೆಸಿದ ಸಿಬಿಐ, 2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.

2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿತ್ತು. ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯತ್ನ ನಡೆದಿದೆ ಎಂಬ ವಿಶ್ವಾಸಾರ್ಹ ಸಾಕ್ಷ್ಯಗಳ ಆಧಾರದ ಮೇಲೆ 2025ರ ಜೂನ್ 7ರಂದು ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿತ್ತು.

ನಂತರ ನ್ಯಾಯಾಲಯದ ಸೂಚನೆ ಮೇರೆಗೆ ವಿನಯ್ ಕುಲಕರ್ಣಿ ಶರಣಾಗಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. 2026ರ ಫೆಬ್ರುವರಿ 27ರಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಒಟ್ಟು 17 ಮಂದಿಯನ್ನು ದೋಷಿಗಳೆಂದು ಘೋಷಿಸಿ, ವಿನಯ್ ಕುಲಕರ್ಣಿ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೊತೆಗೆ 19ನೇ ಆರೋಪಿ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!