ಬೆಂಗಳೂರು: ಖಾದ್ರಿ ಶಾಮಣ್ಣ ಟ್ರಸ್ಟ್ ಇಂದು ಶೇಷಾದ್ರಿಪುರಂ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಖಾದ್ರಿ ಶಾಮಣ್ಣ ಟ್ರಸ್ಟ್ ವತಿಯಿಂದ ಪ್ರತಿವರ್ಷ ಅವರ ಹೆಸರಿನಲ್ಲಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಉದಯ್‌ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರು. ಈ ವೇಳೆ ಪ್ರಶಸ್ತಿಗೆ ಭಾಜನರಾದ ಉದಯ್‌ಕುಮಾರ್ ಅವರಿಗೆ ಖಾದ್ರಿ ಶಾಮಣ್ಣ ಟ್ರಸ್ಟ್ ವತಿಯಿಂದ ಅಭಿನಂದಿಸಿದರು.
ಮುಂದುವರಿದು ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆಯನ್ನು ಮಾಡಿ, ಪತ್ರಿಕಾ ಧರ್ಮವನ್ನು ಹಾಗೂ ಅದರ ಮೌಲ್ಯವನ್ನು ಎತ್ತಿ ಹಿಡಿದ ಕೆಲಸವನ್ನು ಮಾಡಿರುವುದಕ್ಕೆ ಈ ಪ್ರಶಸ್ತಿ ಸಂದಾಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮುಖ್ಯವಾಗಿ, ಯುವಕರಲ್ಲಿ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮ ಬಹಳ ಮುಖ್ಯವಾಗಿದ್ದು, ಅದು ಪ್ರಜಾಪ್ರಭುತ್ವದ ಜೀವಾಳ ಎಂದರು.
ನಮ್ಮ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಸಮಾನತೆ ಇದ್ದು, ಅದನ್ನು ಹೋಗಲಾಡಿಸುವುದು ಯಾರೂ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಅವರ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು.
ಹಿಂದೆ ಖಾದ್ರಿ ಶಾಮಣ್ಣನವರು ಇದ್ದ ಕಾಲದಲ್ಲಿ ಪತ್ರಿಕೋದ್ಯಮದ ಅನುಭವವನ್ನು, ಅದರ ಮೌಲ್ಯಗಳನ್ನು ಎತ್ತಿಹಿಡಿವಂತಹ ಕೆಲಸವನ್ನು ಮಾಡುತ್ತಿದ್ದರು. ನಾನು ಖಾದ್ರಿ ಶಾಮಣ್ಣನವರನ್ನು ಬಹಳ ಹತ್ತಿರದಿಂದ ಬಲ್ಲೆ. ಯಾಕೆಂದರೆ ಅವರು ಸಮಾಜವಾದಿಗಳಾಗಿದ್ದರು. ಹಾಗಾಗಿ ನಾನು ಅವರನ್ನು ಆಗಾಗ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿ ಮಾಡುತ್ತಿದ್ದೆ ಎಂದು ಅವರ ಒಡನಾಟವನ್ನು ನೆನಪಿಸಿಕೊಂಡರು.
ಖಾದ್ರಿ ಶಾಮಣ್ಣನವರು ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದರು. ಅವರ ಸಂಪಾದಕೀಯವೇ ಬಹಳ ಪ್ರಮುಖವಾಗಿರುತ್ತಿತ್ತು. ಎಷ್ಟೇ ಗಂಭೀರ ವಿಷಯವಾದರೂ, ಗಾಢ ವಿಷಯವಾದರೂ ಕೂಡ ಅವರು ಬಳಸುವ ಭಾಷೆ ಬಹಳ ಸರಳವಾಗಿರುತ್ತಿತ್ತು. ಹೀಗಾಗಿ ಅದು ಜನರಿಗೆ ಬೇಗ ತಲುಪುತ್ತಿತ್ತು. ಅವರು ರಾಜಕಾರಣಿಯಾಗಿರಲಿಲ್ಲ, ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜೊತೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ವ್ಯಕ್ತಿಯಾಗಿದ್ದರು. ಸಂವಿಧಾನದ ಮೇಲೆ ಅವರಿಗಿದ್ದ ಬದ್ಧತೆ ಅಪಾರವಾದುದ್ದು.
ಪ್ರತಿಯೊಬ್ಬರು ಕೂಡ ಸಂವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯಕ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಇರುವವರು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ ಎಂದರು. ಸಂವಿಧಾನ ನಿಮಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದೆ, ಆ ಸ್ವಾತಂತ್ರ್ಯವನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸುವಂತಹದ್ದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ದಾರಿ ಬದಲಾಗುತ್ತಿದೆ. ಕೆಲವು ಪತ್ರಿಕೋದ್ಯಮ ಸಂಸ್ಥೆಗಳು ಅದರ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕೆಗಳು ನಿಷ್ಪಕ್ಷಪಾತವಾಗಿ ನೈಜ ವಿಷಯಗಳನ್ನು ಜನರ ಎದುರು ಇಡಬೇಕು. ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ. ಅದನ್ನು ಹೋಗಲಾಡಿಸುವುದು ನಮ್ಮಂತಹ ರಾಜಕಾರಣಿಗಳ ಹಾಗೂ ಪತ್ರಕರ್ತರ ಜವಾಬ್ದಾರಿಯಾಗಿದೆ. ಅಸಮಾನತೆ ಮುಂದುವರಿದರೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.
ಸಂವಿಧಾನ ಬಂದು ಈಗಾಗಲೇ 76 ವರ್ಷಗಳೇ ಆಗಿದೆ, ಆದರೂ ಇನ್ನೂ ಅಸಮಾನತೆ ಕಾಡುತ್ತಲೇ ಇದೆ. ಸಮಾಜದಲ್ಲಿ ಪ್ರಭಾವಿಗಳು, ಪ್ರಭಾವ ಉಳ್ಳದವರು, ಧ್ವನಿಯಿರುವವರು, ಧ್ವನಿ ಇಲ್ಲದವರು ಇದ್ದಾರೆ. ಹೀಗಾಗಿ ನಾವು ಯಾವಾಗಲೂ ಕೂಡ ಸಮಾಜದಲ್ಲಿ ಬಡವರು, ಮಹಿಳೆಯರು, ಹಿಂದುಳಿದವರು, ರೈತರು ಹಾಗೂ ಅಲ್ಪಸಂಖ್ಯಾತರು ಹೀಗೆ ಶೋಷಿತರ ಧ್ವನಿಯಾಗಿ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ನಾನು ಕೂಡ ಸಮಾಜಸೇವೆಯ ಕೆಲಸವನ್ನು ಮಾಡಬೇಕು ಎಂದು ರಾಜಕೀಯವನ್ನು ಆಯ್ಕೆ ಮಾಡಿಕೊಂಡೆ. ಶ್ರೀಮಂತರಾಗಿರುವವರು ಇನ್ನೂ ಕೂಡ ಶ್ರೀಮಂತರಾಗಬೇಕು ಎಂದು ಕೆಲಸ ಮಾಡಬಾರದು. ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು. ಸಂವಿಧಾನದ ಆಶಯವೇ ಸಮಾಸಮಾಜ ನಿರ್ಮಾಣ. ಜಾತಿವ್ಯವಸ್ಥೆ ಹೋಗಲಾಡಿಸಬೇಕು ಎಂದರೆ ಪತ್ರಕೋದ್ಯಮದವರು ಜಾತ್ಯತೀತವಾಗಿವಾಗಿ ಕೆಲಸವನ್ನು ಮಾಡಬೇಕು ಎಂದರು.
ಪತ್ರಿಕೋದ್ಯಮದ ಸಂಸ್ಥೆಗಳು ಸಮಾಜದಲ್ಲಿರುವ ಅಸಮಾನತೆಯನ್ನು ನೋಡಿಕೊಂಡು, ಸಮಸಮಾಜ ನಿರ್ಮಾಣ ಮಾಡುವಂತಹ ಕೆಲಸವನ್ನು ಮಾಡಬೇಕು ಎಂದು ಕರೆಕೊಟ್ಟರು. ಕೆಲವು ಪತ್ರಿಕೋದ್ಯಮಿಗಳು ಅಧಿಕಾರ ಯಾವ ಪಕ್ಷದಲ್ಲಿರುತ್ತದೆಯೋ ಅವರ ಹಿಂದೆ ಸುತ್ತುವಂತ, ಅವರ ಪರವಾಗಿ ನಿಲ್ಲುವಂತಹ ಕೆಲಸವನ್ನು ಮಾಡುತ್ತಾರೆ ಎಂದು ನುಡಿದರು.
ಸಮಾಜವನ್ನು ಒಡೆಯುವಂತಹ, ಸುಳ್ಳು ಸುದ್ದಿಗಳಿಗೆ ಪ್ರಚಾರವನ್ನು ನೀಡುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಮೌಢ್ಯಗಳಿಂದಲೇ ಜಾತಿ ವ್ಯವಸ್ಥೆ ಹೆಚ್ಚಾಗಿರುವಂತಹದ್ದು, ಅಸಮಾನತೆ ಹೆಚ್ಚಾಗಿರುವಂತದ್ದು ಹೀಗಾಗಿ ಮೌಢ್ಯಗಳಿಗೆ ಹೆಚ್ಚು ಒತ್ತು ನೀಡಬಾರದು ಎನ್ನುವ ಕರೆ ನೀಡಿದರು.
ಮೌಢ್ಯಗಳನ್ನು ಆಚರಣೆ ಮಾಡುವ ಕೆಲವು ಪತ್ರಿಕೋದ್ಯಮಗಳನ್ನು ಖಂಡಿಸುವ ಕೆಲಸ ಮಾಡಿದ್ದೆ. ಪತ್ರಿಕಾ ಸ್ವಾಂತ್ರ್ಯವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಮಾಡಬಾರದು.
ಪತ್ರಿಕಾ ಸ್ವಾತಂತ್ರ್ಯಕ್ಕೆ ನಾನು ಹೆಚ್ಚು ಒತ್ತು ಕೊಡುವವನಾಗಿದ್ದು, ಈ ಕಾರಣಕ್ಕಾಗಿ ನಮ್ಮ ಪಕ್ಷದ ಬಗ್ಗೆ ಯಾರೂ ಏನೇ ಬರೆದರೂ ಅಥವಾ ನನ್ನ ಬಗ್ಗೆಯೇ ಬರೆದರೂ, ಟೀಕೆ ಮಾಡಿದರೂ ಯಾವುದೇ ಪತ್ರಿಕಾ ಸಂಸ್ಥೆಯವರಿಗೆ, ಪತ್ರಕರ್ತರಿಗೆ ಇವತ್ತಿನವರೆಗೂ ಫೋನ್ ಮಾಡಿಲ್ಲ, ಮಾಡೋದು ಇಲ್ಲ ಎಂದು ತಮ್ಮ ಅನುಭವವನ್ನು ತಿಳಿಸಿದರು.
ಖಾದ್ರಿ ಶಾಮಣ್ಣನವರು ಇವತ್ತು ಬದುಕಿರುತ್ತಿದ್ದರೇ, ಪತ್ರಿಕೋದ್ಯಮದ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಿದ್ದರು ಎಂದರು. ಅವರ ಹೆಸರಿನಲ್ಲಿ ಪತ್ರಿಕೋದ್ಯಮದ ಶಕ್ತಿಯಿದೆ. ಅವರೊಬ್ಬ ಮಾದರಿ ಪತ್ರಕರ್ತರು, ಮಾರ್ಗದರ್ಶಕರು ಎಂದು ಹೇಳಿದರು.



