ಮೈಸೂರು: ಮುಖ್ಯಮಂತ್ರಿ ಸ್ಥಾನ ಕುರಿತ ಗೊಂದಲಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಶೀಘ್ರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಾವು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರೂ, ಹೈಕಮಾಂಡ್ನಿಂದ ಸ್ಪಷ್ಟ ಸಂದೇಶ ಹೊರಬರಬೇಕೆಂದು ತಿಳಿಸಿದ್ದಾರೆ.
ನಾನು ಸಿಎಂ ಬದಲಾಗುತ್ತಾರೆ ಎಂದೂ ಹೇಳಲ್ಲ, ಮುಂದುವರಿಯುತ್ತಾರೆ ಎಂದೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅಧಿಕಾರ ಮುಂದುವರಿಸಿ ಎಂದು ಗ್ರೀನ್ ಸಿಗ್ನಲ್ ನೀಡಲಿ. ಇಲ್ಲವೇ ಬದಲಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಲಿ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದರೆ ಅದು ಸರ್ಕಾರ ಮತ್ತು ಪಕ್ಷ ಎರಡಕ್ಕೂ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಜಣ್ಣ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕು. ತೀರ್ಮಾನ ತಡವಾದಷ್ಟು ಅದು ಸರ್ಕಾರದ ಕಾರ್ಯಕ್ಷಮತೆ ಮತ್ತು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.



