ಕಲಬುರಗಿ: ಕಳೆದುಹೋದ ಮೊಬೈಲ್ ಫೋನ್ ಮರಳಿ ಸಿಗೋದು ಕನಸೇ ಸರಿ ಎನ್ನುವ ಕಾಲದಲ್ಲಿ ಕಲಬುರಗಿ ನಗರ ಪೊಲೀಸರು ದಾಖಲೆ ಬರೆದಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಬರೋಬ್ಬರಿ 785 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಅಸಲಿ ಮಾಲೀಕರ ಕೈಗೆ ಒಪ್ಪಿಸಿದ್ದಾರೆ.
ಈ ಮೊಬೈಲ್‌ಗಳ ಒಟ್ಟು ಮೌಲ್ಯ 1 ಕೋಟಿ 44 ಲಕ್ಷ 90 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿಇಐಆರ್ ಪೋರ್ಟಲ್ ಸಹಾಯದಿಂದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್‌ಗಳನ್ನು ಟ್ರೇಸ್ ಮಾಡಿ ಪೊಲೀಸರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಈ ಆಪರೇಷನ್ ಸಾರ್ವಜನಿಕರಲ್ಲಿ ಭಾರೀ ವಿಶ್ವಾಸ ಮೂಡಿಸಿದೆ. ಮೊಬೈಲ್ ಕಳೆದುಕೊಂಡು ನಿರಾಶರಾಗಿದ್ದ ನೂರಾರು ಮಂದಿ ಮತ್ತೆ ತಮ್ಮ ಫೋನ್ ಪಡೆದು ಖುಷಿಪಟ್ಟಿದ್ದಾರೆ.
“ಪೊಲೀಸರು ಇಷ್ಟು ವೇಗವಾಗಿ ಮೊಬೈಲ್ ಹುಡುಕಿ ಕೊಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿದ ಕಲಬುರಗಿ ಪೊಲೀಸರ ಈ ಸಾಧನೆ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.



