ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕ ಮೂಡಿಸಿದ್ದು, ತುಮಕೂರು ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿದೆ.
ಕಳೆದ 15 ದಿನಗಳ ಹಿಂದಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 44 ನವಿಲುಗಳು ಸಾವನ್ನಪ್ಪಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ನವಿಲುಗಳು ಮೃತಪಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕಳೆದ ತಿಂಗಳು ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಸುಮಾರು 32 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ತೀವ್ರ ಬಿಸಿಗಾಳಿ ಮತ್ತು ಹೀಟ್ ಸ್ಟ್ರೋಕ್ನಿಂದ ನವಿಲುಗಳು ಸಾವನ್ನಪ್ಪಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.
ಆದರೆ ಬಳಿಕ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗೆ ಕಳುಹಿಸಿದಾಗ, ಅವುಗಳಿಗೆ ಹೆಚ್5ಎನ್1 ಸೋಂಕು, ಅಂದರೆ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ.
ಇದೀಗ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಪತ್ತೆಯಾದ ಎರಡು ನವಿಲುಗಳ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಅವುಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



