ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಹಕ್ಕಿ ಜ್ವರದ ಭೀತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ ಒಂದು ತಿಂಗಳಲ್ಲಿ 54ಕ್ಕೂ ಅಧಿಕ ನವಿಲುಗಳು ಸಾವನ್ನಪ್ಪಿರುವುದು ಪರಿಸರ ಮತ್ತು ಆರೋಗ್ಯ ಇಲಾಖೆಗಳನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಕೆಲ ನವಿಲುಗಳಲ್ಲಿ H5N1 ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ತುಮಕೂರು ತಾಲೂಕಿನ ವಿವಿಧ ಭಾಗಗಳಲ್ಲಿ ಆರಂಭವಾದ ನವಿಲುಗಳ ಸಾವು ಇದೀಗ ಕುಣಿಗಲ್ ವ್ಯಾಪ್ತಿಗೂ ವಿಸ್ತರಿಸಿದೆ. ಕಾಡು ಪ್ರದೇಶಗಳಲ್ಲಿ ನಿರಂತರವಾಗಿ ನವಿಲಿನ ಕಳೆಬರಗಳು ಪತ್ತೆಯಾಗುತ್ತಿದ್ದು, ಸೋಂಕು ವೇಗವಾಗಿ ಹರಡುತ್ತಿರುವ ಶಂಕೆ ವ್ಯಕ್ತವಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಲ್ಯಾಬ್‌ಗೆ ರವಾನಿಸಲಾಗಿದ್ದು, ಅಧಿಕಾರಿಗಳು ವರದಿಗಾಗಿ ಕಾದಿದ್ದಾರೆ.
ಜಿಲ್ಲಾ ಪಶುಸಂಗೋಪನಾ ಇಲಾಖೆ ಹೈ ಅಲರ್ಟ್ ಘೋಷಿಸಿ, ಗ್ರಾಮೀಣ ಭಾಗಗಳಲ್ಲಿ ನಿಗಾವ್ಯವಸ್ಥೆ ಬಿಗಿಗೊಳಿಸಿದೆ. ಯಾವುದೇ ಪಕ್ಷಿ ಅಥವಾ ಕಾಡುಪ್ರಾಣಿಗಳ ಅಸಹಜ ಸಾವು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕೋಳಿ ಫಾರಂಗಳು, ಜಲಾಶಯ ಪ್ರದೇಶಗಳು ಹಾಗೂ ಕಾಡು ವಲಯಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.
ಇದರ ಮಧ್ಯೆ ಬೊಮ್ಮನಹಳ್ಳಿ ಕೋಳಿ ಫಾರಂನಲ್ಲಿ ಸಾವನ್ನಪ್ಪಿದ್ದ 30ಕ್ಕೂ ಹೆಚ್ಚು ಕೋಳಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗದಿದ್ದರೂ, ನವಿಲುಗಳ ನಿರಂತರ ಸಾವು ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.



