ಬೆಂಗಳೂರು: ರಸ್ತೆ ಅಪಘಾತ ಪ್ರಕರಣದಲ್ಲಿ ತನ್ನದೇ ಸಿಬ್ಬಂದಿಯ ತಪ್ಪನ್ನು ಮುಚ್ಚಿಟ್ಟು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಯತ್ನಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ನಿಗಮವು ಈಗಾಗಲೇ ತನ್ನ ಸಿಬ್ಬಂದಿಯ ವಿರುದ್ಧ ಆಂತರಿಕ ಶಿಸ್ತು ಕ್ರಮ ಕೈಗೊಂಡಿದ್ದರೂ, ನ್ಯಾಯಾಲಯದ ಮುಂದೆ ಮೃತ ವ್ಯಕ್ತಿಯದ್ದೇ ತಪ್ಪು ಎಂದು ವಾದ ಮಂಡಿಸಿರುವುದು ದ್ವಂದ್ವ ನಿಲುವು ಎಂದು ಹೈಕೋರ್ಟ್ ಕಿಡಿಕಾರಿದೆ. ಇದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದ್ದು, ನ್ಯಾಯಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ನಡೆ ಎಂದು ಪೀಠ ಸ್ಪಷ್ಟಪಡಿಸಿದೆ.
ಅಪಘಾತ ಪರಿಹಾರ ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ಕೆಕೆಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಿಧಿಸಿರುವ 25 ಸಾವಿರ ರೂಪಾಯಿ ದಂಡವನ್ನು ಪ್ರಕರಣಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠ, ಅಪಘಾತದ ಬಳಿಕ ನಿಗಮವು ಗುತ್ತಿಗೆ ಆಧಾರಿತ ಚಾಲಕನನ್ನು ಸೇವೆಯಿಂದ ವಜಾಗೊಳಿಸಿರುವುದನ್ನೂ, ನಿರ್ವಾಹಕನ ವಾರ್ಷಿಕ ವೇತನ ಬಡ್ತಿಯನ್ನು ಕಡಿತಗೊಳಿಸಿರುವುದನ್ನೂ ಉಲ್ಲೇಖಿಸಿತು. ಒಂದು ಕಡೆ ಸಿಬ್ಬಂದಿಯ ತಪ್ಪು ಒಪ್ಪಿಕೊಂಡು ಶಿಕ್ಷೆ ನೀಡಿರುವ ನಿಗಮ, ಮತ್ತೊಂದೆಡೆ ಮೃತರದ್ದೇ ತಪ್ಪು ಎಂದು ವಾದಿಸುವುದು ಕಾನೂನುಬಾಹಿರ ದ್ವಂದ್ವ ನಿಲುವು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇದೇ ವೇಳೆ, ನ್ಯಾಯಾಲಯಕ್ಕೆ ಬರುವ ಯಾವುದೇ ದಾವೆದಾರರು ಶುದ್ಧ ಹಸ್ತದಿಂದ ಬರಬೇಕು. ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಪ್ರಕ್ರಿಯೆಯನ್ನು ದಾರಿ ತಪ್ಪಿಸಲು ಯತ್ನಿಸುವವರು ಯಾವುದೇ ಪರಿಹಾರಕ್ಕೆ ಅರ್ಹರಾಗುವುದಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಆಂತರಿಕ ಶಿಸ್ತು ಕ್ರಮದ ವಿವರಗಳನ್ನು ನ್ಯಾಯಾಲಯದ ಮುಂದೆ ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಇದೇ ರೀತಿಯ ದ್ವಂದ್ವ ನಿಲುವುಗಳನ್ನು ತಡೆಯಲು ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಿ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ ಕುರಿತು ಹೇಳುವುದಾದರೆ, ವಿನೋದ್ ಕುಮಾರ್ ಮಾನೆ ಎಂಬವರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣವು, ಮೃತರ ಕುಟುಂಬಕ್ಕೆ 1 ಕೋಟಿ 10 ಲಕ್ಷ 36 ಸಾವಿರ 200 ರೂಪಾಯಿ ಪರಿಹಾರವನ್ನು ಶೇ.6 ಬಡ್ಡಿದರದೊಂದಿಗೆ ನೀಡುವಂತೆ 2025ರ ಮಾರ್ಚ್ 14ರಂದು ಕೆಕೆಆರ್‌ಟಿಸಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ನಿಗಮವು ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ಕೆಕೆಆರ್‌ಟಿಸಿ ಪರ ವಕೀಲರು, ಮೃತ ವ್ಯಕ್ತಿಯೇ ಬಸ್ ಬಾಗಿಲಲ್ಲಿ ನಿಂತು ನಿರ್ಲಕ್ಷ್ಯದಿಂದ ಪ್ರಯಾಣಿಸಿದ್ದರಿಂದ ಘಟನೆ ನಡೆದಿದೆ ಎಂದು ವಾದ ಮಂಡಿಸಿದ್ದರು. ಆದರೆ, ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕೈಗೊಂಡ ಶಿಸ್ತು ಕ್ರಮದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ಚಾಲಕನನ್ನು ಸೇವೆಯಿಂದ ವಜಾಗೊಳಿಸಿರುವುದನ್ನೂ, ನಿರ್ವಾಹಕನ ವೇತನ ಬಡ್ತಿ ಕಡಿತಗೊಳಿಸಿರುವುದನ್ನೂ ನಿಗಮ ಪರ ವಕೀಲರು ಒಪ್ಪಿಕೊಂಡಿದ್ದರು.



