ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಖರೀದಿಸಿದ್ದ ಚೆನ್ನೈನ ಬಹುಮೌಲ್ಯದ ಭೂಮಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಬೋನಿ ಕಪೂರ್ ಕುಟುಂಬಕ್ಕೆ ಭಾರೀ ಜಯ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್, ಶೋಲಿಂಗನಲ್ಲೂರ್‌ನ 2.70 ಎಕರೆ ಆಸ್ತಿಯ ಮೇಲಿನ ದಾವೆಯನ್ನು ಸಂಪೂರ್ಣ ವಜಾಗೊಳಿಸಿದೆ.
1940ರ ದಾಖಲೆಗಳನ್ನು ಆಧಾರವಾಗಿಸಿಕೊಂಡು ಎಂ.ಸಿ. ಶಿವಕಾಮಿ ಹಾಗೂ ಇತರರು ಈ ಜಾಗ ತಮ್ಮ ಕುಟುಂಬಕ್ಕೆ ಸೇರಿದೆ ಎಂದು ವಾದಿಸಿದ್ದರು. 1988ರಲ್ಲಿ ಶ್ರೀದೇವಿ ನಡೆಸಿದ ಖರೀದಿ ವ್ಯವಹಾರ ಕಾನೂನುಬದ್ಧವಲ್ಲ ಎಂದು ಆರೋಪಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಬೋನಿ ಕಪೂರ್ ಪರ ವಕೀಲರು, ನಾಲ್ಕು ದಶಕಗಳ ಬಳಿಕ ಆಸ್ತಿ ಮೇಲೆ ಹಕ್ಕು ಹೇಳುವುದು ಕೇವಲ ಕಬಳಿಕೆ ಉದ್ದೇಶದ ಪ್ರಯತ್ನ ಎಂದು ತೀವ್ರವಾಗಿ ವಾದಿಸಿದ್ದರು. ದೂರುದಾರರು ಸಲ್ಲಿಸಿದ್ದ ವಾರಸುದಾರರ ದಾಖಲೆಗಳು ಮಾನ್ಯವಲ್ಲ ಎಂದು ಕೋರ್ಟ್ ಗಮನಕ್ಕೆ ತರಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಈ ದಾವೆ ಕಾಲಮಿತಿಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ ಕಾನೂನಿನ ದುರುಪಯೋಗದ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ತೀರ್ಪಿನೊಂದಿಗೆ ಶ್ರೀದೇವಿ ಆಸ್ತಿ ಕಾನೂನುಬದ್ಧವಾಗಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಸೇರಿದೆ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.



