ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ.
ಅನೇಕರು ದಿನದ ಆರಂಭವನ್ನು ಒಂದು ಕಪ್ ಸ್ಟ್ರಾಂಗ್ ಕಾಫಿಯೊಂದಿಗೆ ಮಾಡುತ್ತಾರೆ. ಆದರೆ ಕಾಫಿ ಸೇವನೆಯಿಂದ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಅದನ್ನು ಸರಿಯಾದ ಸಮಯದಲ್ಲಿ ಕುಡಿಯುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಕಾಫಿ ಕುಡಿಯಲು ಯಾವ ಸಮಯ ಉತ್ತಮ?
ತಜ್ಞರ ಪ್ರಕಾರ ಬೆಳಿಗ್ಗೆ 9:30 ರಿಂದ 11:30 ಗಂಟೆಯ ನಡುವಿನ ಅವಧಿ ಕಾಫಿ ಕುಡಿಯಲು ಅತ್ಯುತ್ತಮ ಸಮಯವಾಗಿದೆ. ಈ ವೇಳೆ ದೇಹದಲ್ಲಿನ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಚೈತನ್ಯ ದೊರೆಯುವುದರ ಜೊತೆಗೆ ಮೆದುಳು ಚುರುಕಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.
ಇದೇ ರೀತಿ ಮಧ್ಯಾಹ್ನ 2ರಿಂದ 4 ಗಂಟೆಯ ನಡುವೆಯೂ ಕಾಫಿ ಸೇವಿಸಬಹುದು. ಇದು ಮಧ್ಯಾಹ್ನದ ಆಲಸ್ಯವನ್ನು ದೂರ ಮಾಡಿ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಬೇಡ:
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆಮ್ಲೀಯತೆ, ಹೊಟ್ಟೆ ಉರಿ, ಮಲಬದ್ಧತೆ ಸೇರಿದಂತೆ ಹಲವು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸಂಜೆ ತಡವಾಗಿ ಕಾಫಿ ಕುಡಿಯುವುದು ಸೂಕ್ತವಲ್ಲ:
ಸಂಜೆ 4 ಗಂಟೆಯ ನಂತರ ಕಾಫಿ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿ 6 ರಿಂದ 8 ಗಂಟೆಗಳವರೆಗೆ ಪರಿಣಾಮ ಬೀರುವ ಕಾರಣ ರಾತ್ರಿ ನಿದ್ರೆಗೆ ತೊಂದರೆ ಉಂಟಾಗಬಹುದು. ಜೊತೆಗೆ ಹಸಿವಿನ ಮೇಲೂ ಪರಿಣಾಮ ಬೀರಬಹುದು.
ಮಿತವಾದ ಕಾಫಿ ಸೇವನೆಯ ಪ್ರಯೋಜನಗಳು:
- ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
- ಆಯಾಸವನ್ನು ಕಡಿಮೆ ಮಾಡಿ ಚೈತನ್ಯ ನೀಡುತ್ತದೆ.
- ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
- ಖಿನ್ನತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
- ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
- ಅಲ್ಝೈಮರ್ ಕಾಯಿಲೆಯ ಅಪಾಯವನ್ನು ತಗ್ಗಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
- ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಆರೋಗ್ಯ ರಕ್ಷಣೆಗೆ ನೆರವಾಗುತ್ತವೆ.
- ತೂಕ ನಿಯಂತ್ರಣಕ್ಕೆ ಸಹಕಾರಿ.
- ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ನೆರವಾಗಬಹುದು.
ಆದರೆ ಯಾವುದೇ ಆಹಾರ ಅಥವಾ ಪಾನೀಯದಂತೆ ಕಾಫಿಯನ್ನೂ ಹಿತಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.



