ಹಾಸನ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಸರ್ಕಾರ ರಚನೆಗೆ ಸಜ್ಜಾಗಿರುವ ನಟ ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ವಿಜಯ್ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಲು ಭಾರೀ ಪ್ರಮಾಣದ ಹಣದ ಅಗತ್ಯವಿದ್ದು, ಅದನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.
ತಮಿಳುನಾಡು ಸರ್ಕಾರದ ವಾರ್ಷಿಕ ಬಜೆಟ್ ಸುಮಾರು ₹3.30 ಲಕ್ಷ ಕೋಟಿ ರಿಂದ ₹3.40 ಲಕ್ಷ ಕೋಟಿ ವರೆಗೆ ಇದೆ. ಆದರೆ ವಿಜಯ್ ಪ್ರಕಟಿಸಿರುವ ಉಚಿತ ಯೋಜನೆಗಳನ್ನು ಜಾರಿಗೆ ತರಲು ವರ್ಷಕ್ಕೆ ಅಂದಾಜು ₹6 ರಿಂದ ₹7 ಲಕ್ಷ ಕೋಟಿ ವೆಚ್ಚವಾಗಬಹುದು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ರಾಜ್ಯದ ಒಟ್ಟು ಬಜೆಟ್ಗಿಂತಲೂ ಹೆಚ್ಚು ಹಣ ಬೇಕಾಗುವ ಯೋಜನೆಗಳನ್ನು ಜಾರಿಗೆ ತರುವುದು ಸುಲಭದ ಕೆಲಸವಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವಿಜಯ್ ಹೇಗೆ ಹೊಂದಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದು ಹೇಳಿದರು. ಇದೇ ವೇಳೆ “ವಿಜಯ್ ಅವರನ್ನು ದೇವರೇ ಕಾಪಾಡಬೇಕು” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.



