ಹೈದರಾಬಾದ್: ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಸುಮಾರು 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಾರ್ವಜನಿಕರು, ಇತಿಹಾಸ ತಜ್ಞರು ಹಾಗೂ ಪರಂಪರೆ ಸಂರಕ್ಷಣಾ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾನಾಪುರ ಮಂಡಲದ ಅಶೋಕ್ ನಗರದಲ್ಲಿದ್ದ ಈ ಶಿವ ದೇವಾಲಯವು 13ನೇ ಶತಮಾನದಲ್ಲಿ ಕಾಕತೀಯ ಅರಸ ಗಣಪತಿದೇವನ ಕಾಲಕ್ಕೆ ಸೇರಿದದ್ದು ಎಂದು ಹೇಳಲಾಗಿದೆ. ದೇವಾಲಯದಲ್ಲಿದ್ದ ಶಾಸನದಲ್ಲಿ ರಾಜನನ್ನು “ಮಹಾರಾಜ” ಹಾಗೂ “ರಾಜಾಧಿರಾಜುಲು” ಎಂದು ಉಲ್ಲೇಖಿಸಿರುವ ಅಪರೂಪದ ಏಳು ಸಾಲಿನ ತೆಲುಗು ಶಾಸನ ಕೂಡ ಪತ್ತೆಯಾಗಿತ್ತು.
1965ರಲ್ಲೇ ಈ ದೇವಾಲಯವನ್ನು ಪರಂಪರೆ ಇಲಾಖೆಯಲ್ಲಿ ದಾಖಲಿಸಲಾಗಿತ್ತು. ಐತಿಹಾಸಿಕ ಕೋಟೆಗಳಿಗೆ ಪ್ರಸಿದ್ಧಿಯಾಗಿರುವ ಕೋಟ ಕಟ್ಟ ಪ್ರದೇಶದ ಮಣ್ಣಿನ ಕೋಟೆಯೊಳಗೆ ಈ ದೇವಾಲಯವಿತ್ತು. ಈ ಪರಂಪರೆಯ ತಾಣವನ್ನು ಸಂರಕ್ಷಿಸುವ ಅಥವಾ ಅಗತ್ಯವಿದ್ದರೆ ಸ್ಥಳಾಂತರಿಸುವ ಅವಕಾಶ ಇದ್ದರೂ ಅದನ್ನು ಧ್ವಂಸ ಮಾಡಲಾಗಿದೆ ಎಂಬುದು ಇತಿಹಾಸ ತಜ್ಞರ ಆರೋಪವಾಗಿದೆ.
ಈ ಘಟನೆಗೆ ಸಂಬಂಧಿಸಿ ತೆಲಂಗಾಣದ ವಕೀಲ ರಾಮರಾವ್ ಇಮ್ಮನೇನಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಆರಂಭಿಸಿವೆ.
ರಾಜ್ಯ ಸರ್ಕಾರ ಕಡ್ಡಾಯ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಪುರಾತತ್ವ ಹಾಗೂ ದತ್ತಿ ಇಲಾಖೆಗಳ ಅಗತ್ಯ ಅನುಮೋದನೆಗಳಿಲ್ಲದೆ ಕಾಮಗಾರಿಗೆ ಅವಕಾಶ ನೀಡಿದವರ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ ಸೆಕ್ಷನ್ 30 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ದೇವಾಲಯವನ್ನು ಉದ್ದೇಶಪೂರ್ವಕವಾಗಿ ಧ್ವಂಸ ಮಾಡಲಾಗಿದೆ ಎಂಬ ಆರೋಪವನ್ನು ವಾರಂಗಲ್ ಜಿಲ್ಲಾಡಳಿತ ತಳ್ಳಿ ಹಾಕಿದೆ. 30 ಎಕರೆ ಪ್ರದೇಶದಲ್ಲಿ ದಟ್ಟ ಪೊದೆಗಳನ್ನು ತೆರವುಗೊಳಿಸುವ ವೇಳೆ ಶಿಥಿಲಗೊಂಡ ಹಳೆಯ ಅವಶೇಷಗಳು ಮಾತ್ರ ಪತ್ತೆಯಾಗಿವೆ. ಇದನ್ನು ಅಧಿಕೃತ ಸಂರಕ್ಷಿತ ಸ್ಮಾರಕವಾಗಿ ದಾಖಲಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.



