ಕೋಲಾರ: ಈಜಲು ಹೋಗಿದ್ದ ಅಣ್ಣ-ತಮ್ಮ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚರಮಾಕಲಹಳ್ಳಿ ಬಳಿ ನಡೆದಿದೆ.
ಚಾಂಪಲ್ಲಿ ಗ್ರಾಮದ ನರೇಂದ್ರ (25) ಮತ್ತು ಚಂದನ್ (23) ಮೃತ ದುರ್ದೈವಿಗಳು. ಇಬ್ಬರೂ ಗಾರೆ ಕೆಲಸಕ್ಕಾಗಿ ಆ ಭಾಗಕ್ಕೆ ತೆರಳಿದ್ದು, ಮಧ್ಯಾಹ್ನದ ಬಿಸಿಲಿನ ನಡುವೆ ಕೆರೆಯಲ್ಲಿ ಈಜಲು ಇಳಿದಿದ್ದರು.
ಈ ವೇಳೆ ನೀರಿನ ಆಳ ಅರಿಯದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ.
ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದರೂ, ಕುಟುಂಬದವರು ಯಾವುದೇ ದೂರು ನೀಡದ ಕಾರಣ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಬಳಿಕ ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.



