ಬೆಂಗಳೂರು: ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ಕಾಂಪೌಂಡ್ ಗೇಟ್ ಕುಸಿದು ಬಿದ್ದ ಪರಿಣಾಮ 5 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದ ದ್ವಾರಕಾನಗರದಲ್ಲಿ ನಡೆದಿದೆ.
ಅವಘಡದಲ್ಲಿ ಗೌಸಿಯಾ ಎಂಬ ಮಗು ಮೃತಪಟ್ಟಿದ್ದು, ಅಣ್ಣ ಇಮಾಮ್ ಹಾಗೂ ತಂಗಿ ಶಕಿಲಾ ಗಾಯಗೊಂಡಿದ್ದಾರೆ. ಮತ್ತೊಬ್ಬ 3 ವರ್ಷದ ಮಗು ಸುಮಯ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಮೃತ ಗೌಸಿಯಾ, ಇಮಾಮ್ ರಮೀಜಾ ದಂಪತಿಯ ಪುತ್ರಿಯಾಗಿದ್ದು, ಕುಟುಂಬವು ಕಳೆದ ಐದು ತಿಂಗಳ ಹಿಂದಷ್ಟೇ ಈ ಬಾಡಿಗೆ ಮನೆಗೆ ವಾಸಕ್ಕೆ ಬಂದಿತ್ತು. ಬಸ್ ನಿಲ್ದಾಣದ ಬಳಿ ಹಣ್ಣಿನ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದ ದಂಪತಿ, ರವಿಶಂಕರ್ ಎಂಬುವವರಿಗೆ ಸೇರಿದ ಮನೆಯಲ್ಲಿ ನೆಲೆಸಿದ್ದರು.
ಘಟನೆಯ ಬಳಿಕ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



