ಹಾಸನ: ಯುವತಿ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಬಳಿ ನಡೆದಿದೆ.
ತಾಲೂಕಿನ ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕ ಎಂದು ಗುರುತಿಸಲಾಗಿದೆ. ಯುವತಿಯೊಬ್ಬಳ ವಿಚಾರದಲ್ಲಿ ಗ್ರಾಮದ ಶಂಕರ, ದರ್ಶನ್, ಚೇತನ್ ಹಾಗೂ ದಿನೇಶ್ ಎಂಬವರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಅಭಿಷೇಕ್ ಆತ್ಮಹತ್ಯೆಗೆ ಮುನ್ನ ಆಡಿಯೋ ರೆಕಾರ್ಡ್ ಮಾಡಿಟ್ಟಿದ್ದಾನೆ ಎನ್ನಲಾಗಿದೆ.
ಆಡಿಯೋದಲ್ಲಿ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವ ಅಭಿಷೇಕ್, ಬಳಿಕ ಭಾನುವಾರ ಸಂಜೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಯುವಕನ ಆಡಿಯೋ ದಾಖಲೆಯನ್ನು ಆಧರಿಸಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



