ಮುಂಬೈ: ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ “ಭಾರತೀಯರು ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಮಾರುಕಟ್ಟೆಯಲ್ಲಿ ತಕ್ಷಣದ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಪ್ರಧಾನಿಯವರ ಈ ಹೇಳಿಕೆಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಬೆಳಗ್ಗೆ 9:40ರ ವೇಳೆಗೆ ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ ಸುಮಾರು 574 ರೂ. ಇಳಿಕೆಯಾಗಿದ್ದು, 1,53,669 ರೂ. ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ.
ಇತ್ತ ಬೆಳ್ಳಿಯ ದರದಲ್ಲಿ ಏರಿಕೆ ದಾಖಲಾಗಿದೆ. ಜೂನ್ ಫ್ಯೂಚರ್ ಬೆಳ್ಳಿ ದರವು 698 ರೂ. ಏರಿಕೆಯಾಗಿದ್ದು, 2,65,957 ರೂ. ಮಟ್ಟದಲ್ಲಿ ವ್ಯವಹಾರ ನಡೆಯುತ್ತಿದೆ. ಮಾರುಕಟ್ಟೆ ಮುಕ್ತಾಯವಾಗುವ ವೇಳೆಗೆ ದರಗಳಲ್ಲಿ ಇನ್ನಷ್ಟು ಏರಿಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಉಂಟುಮಾಡುತ್ತಿದೆ. ಈ ಸವಾಲಿನ ಸಂದರ್ಭದಲ್ಲಿ ಭಾರತೀಯರು ದೇಶದ ಆರ್ಥಿಕ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತವು ಚಿನ್ನದ ಅಗತ್ಯದ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಿಂದ ದೇಶದ ವಿದೇಶಿ ವಿನಿಮಯ ನಿಧಿಯಿಂದ ದೊಡ್ಡ ಮೊತ್ತ ಹೊರಹೋಗುತ್ತಿದೆ. ಆಮದು ವೆಚ್ಚ ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಈ ಮನವಿ ಮಾಡಿದ್ದಾರೆ ಎನ್ನಲಾಗಿದೆ.



