ತಾಯ್ತನದ ನಂತರದ ಬದುಕಿನ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮನಮುಟ್ಟುವ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ದೊಡ್ಡ ಬದಲಾವಣೆ ಎದುರಿಸಿದ್ದಾಗಿ ಹೇಳಿದ ನಟಿ, ಸಂದರ್ಶನದ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕಿಯಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದ ವೇಳೆ ಏಳು ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಗರ್ಭಿಣಿಯಾಗಿದ್ದರೂ ಅವರು ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಚಿತ್ರತಂಡ ತುಂಬಾ ಗುಪ್ತವಾಗಿ ಇಟ್ಟಿತ್ತು ಎನ್ನಲಾಗಿದೆ.
‘ಶೂಟಿಂಗ್ ಸಮಯದಲ್ಲಿ ವ್ಯಾನ್‌ಗೆ ಹೋಗಿ ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ಮಾತನಾಡುತ್ತಿದ್ದೆ. ಅಮ್ಮ ಕೇವಲ ಆ್ಯಕ್ಟಿಂಗ್ ಮಾಡುತ್ತಿದ್ದಾಳೆ, ಹೆದರಬೇಡ ಎಂದು ಹೇಳುತ್ತಿದ್ದೆ’ ಎಂದು ಕಿಯಾರಾ ಹೇಳಿದ್ದಾರೆ. ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಾಯ್ತನದ ಆರಂಭದ ದಿನಗಳು ತುಂಬಾ ಕಠಿಣವಾಗಿದ್ದವು ಎಂದು ಹೇಳಿದ ನಟಿ, ‘ಮಗು ಹುಟ್ಟಿದ ಬಳಿಕ ಮೊದಲ ಆರು ತಿಂಗಳು ನನಗೆ ನನ್ನ ಬಗ್ಗೆ ಯೋಚಿಸುವ ಅವಕಾಶವೇ ಇರಲಿಲ್ಲ’ ಎಂದು ಹೇಳಿದ್ದಾರೆ.
ಇದೇ ವೇಳೆ ಯಶ್ ಜೊತೆಗಿನ ಆಪ್ತ ದೃಶ್ಯಗಳನ್ನು ಸಿನಿಮಾದಿಂದ ತೆಗೆಸಲು ತಾವು ಒತ್ತಾಯಿಸಿದ್ದೇವೆ ಎಂಬ ವದಂತಿಯನ್ನು ಕಿಯಾರಾ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ‘ಅದು ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ.
ಪತಿ ಸಿದ್ಧಾರ್ಥ್ ಮಲ್ಹೋತ್ರಾ ಕುರಿತು ಮಾತನಾಡಿದ ಅವರು, ‘ಅವರು ಅದ್ಭುತ ತಂದೆ. ಪ್ರತಿಯೊಂದು ಹಂತದಲ್ಲೂ ನನ್ನ ಜೊತೆ ನಿಂತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



