Home Karnataka News ಮೋದಿ ಸಂಚರಿಸುವ ಮಾರ್ಗದಲ್ಲೇ ಜಿಲೆಟಿನ್ ಪತ್ತೆ: NIA, ರಾ ಸೇರಿದಂತೆ ಕೇಂದ್ರ ಏಜೆನ್ಸಿಗಳ ತೀವ್ರ ತನಿಖೆ

ಮೋದಿ ಸಂಚರಿಸುವ ಮಾರ್ಗದಲ್ಲೇ ಜಿಲೆಟಿನ್ ಪತ್ತೆ: NIA, ರಾ ಸೇರಿದಂತೆ ಕೇಂದ್ರ ಏಜೆನ್ಸಿಗಳ ತೀವ್ರ ತನಿಖೆ

0
ಮೋದಿ ಸಂಚರಿಸುವ ಮಾರ್ಗದಲ್ಲೇ ಜಿಲೆಟಿನ್ ಪತ್ತೆ: NIA, ರಾ ಸೇರಿದಂತೆ ಕೇಂದ್ರ ಏಜೆನ್ಸಿಗಳ ತೀವ್ರ ತನಿಖೆ
Spread the love

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರೀಯ ಮತ್ತು ಕೇಂದ್ರ ಮಟ್ಟದ ತನಿಖಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

ಎನ್ಐಎ, ರಾ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆಗೆ ಇಳಿದಿದ್ದು, ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿ ನೇತೃತ್ವದ ತಂಡ ವಡೇರಹಳ್ಳಿ ಗೇಟ್ ಸಮೀಪದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರಿಂದ ಎನ್ಐಎ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎನ್ಎಸ್ಜಿ ಪಡೆಯ ಹಿರಿಯ ಅಧಿಕಾರಿಗಳು ಕೂಡ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆಯ ಪ್ರಗತಿ ಕುರಿತು ವರದಿ ಪಡೆದುಕೊಂಡಿದ್ದಾರೆ. ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.

ಜಿಲೆಟಿನ್ ಕಡ್ಡಿಗಳಿದ್ದ ಪೆಟ್ಟಿಗೆಗಳನ್ನು ಉದ್ದೇಶಪೂರ್ವಕವಾಗಿ ಅಲ್ಲಿ ಇರಿಸಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದ್ದು, ಸ್ಫೋಟಕಗಳನ್ನು ಯಾವ ಸಮಯದಲ್ಲಿ ತರಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವುದು ತನಿಖೆಗೆ ಅಡಚಣೆಯಾಗಿದೆ.

ಆದರೆ, ರಸ್ತೆ ಪ್ರವೇಶ ಮತ್ತು ನಿರ್ಗಮನ ಭಾಗಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಗ್ಗಲಿಪುರ ಠಾಣೆ ಪೊಲೀಸರು ಮತ್ತು ಎನ್ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಿವೆ.

ಈ ಪ್ರಕರಣದ ಹಿಂದೆ ಅಂತರರಾಜ್ಯ ಅಥವಾ ಅಂತರಜಿಲ್ಲಾ ಸಂಪರ್ಕ ಇದೆಯೇ ಎಂಬ ದಿಕ್ಕಿನಲ್ಲಿ ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆಯೂ ಈ ರೀತಿಯ ಭದ್ರತಾ ಲೋಪ ಸಂಭವಿಸಿರುವುದು ಕೇಂದ್ರ ಹಾಗೂ ರಾಜ್ಯ ಭದ್ರತಾ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here