ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಆಗಿ ದಳಪತಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರ ನಡುವಿನ ಮಾತುಕತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ “ನಾನು ಸಿದ್ದರಾಮಯ್ಯ ಮಾತಾಡ್ತಿದ್ದೀನಿ… ಇತಿಹಾಸ ಸೃಷ್ಟಿ ಮಾಡಿದ ನಿಮಗೆ ಅಭಿನಂದನೆಗಳು. ಬೆಂಗಳೂರಿಗೆ ಬಂದಾಗ ಇಬ್ಬರೂ ಭೇಟಿಯಾಗೋಣ” ಎಂದು ಸಿದ್ದರಾಮಯ್ಯ ಹೇಳಿರುವುದು ಕೇಳಿಬಂದಿದೆ.
ಇದೇ ವೇಳೆ ಎಕ್ಸ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿರುವ ಸಿದ್ದರಾಮಯ್ಯ, ಸಿನಿಮಾ ಕ್ಷೇತ್ರದಿಂದ ಜನಸೇವೆಯತ್ತ ವಿಜಯ್ ನಡೆಸಿರುವ ಪ್ರಜಾಪ್ರಭುತ್ವದ ಪಯಣವನ್ನು ಶ್ಲಾಘಿಸಿದ್ದಾರೆ. “ಕರ್ನಾಟಕ ಮತ್ತು ತಮಿಳುನಾಡು ಜನರ ಅಭಿವೃದ್ಧಿ, ಸಾಂಸ್ಕೃತಿಕ ಬಾಂಧವ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಶುಭಹಾರೈಸಿದ್ದಾರೆ.
ಚೊಚ್ಚಲ ಚುನಾವಣೆಯಲ್ಲೇ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಬಹುಮತದ ಮ್ಯಾಜಿಕ್ ನಂಬರ್ ತಲುಪಿದ ವಿಜಯ್, ಭಾನುವಾರ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಇದೀಗ ಮೇ 13ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ವಿಜಯ್ ಅವರಿಗೆ ಕಾಲಾವಕಾಶ ನೀಡಿದ್ದಾರೆ.



