ಮಂಗಳೂರು, ಮೇ 12: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗೆ ಸಂಬಂಧಿಸಿದ ಉತ್ಖನನ ಕಾರ್ಯಾಚರಣೆ ಇದೀಗ ಆಡಳಿತಾತ್ಮಕ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಟಿ ಸೂಚನೆಯಂತೆ ನಡೆಸಲಾಗಿದ್ದ 17 ಸ್ಥಳಗಳ ಉತ್ಖನನ ಕಾರ್ಯದ ವೆಚ್ಚ ಪಾವತಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
2025ರ ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯದವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಜೆಸಿಬಿ, ಹಿಟಾಚಿ ಸೇರಿದಂತೆ ಯಂತ್ರೋಪಕರಣಗಳು ಹಾಗೂ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಸುಮಾರು 2 ಲಕ್ಷ ರೂ.ಗೂ ಅಧಿಕ ಬಿಲ್ ಬಾಕಿ ಉಳಿದಿದೆ ಎಂದು ಮಾಲಕರು ತಿಳಿಸಿದ್ದಾರೆ.
ಜೆಸಿಬಿ ಬಾಡಿಗೆ, ಕಾರ್ಮಿಕರ ಕೂಲಿ, ನೀರು, ಶಾಮಿಯಾನ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಸೇರಿಸಿದಾಗ ಒಟ್ಟು ಬಾಕಿ ಮೊತ್ತ ಹೆಚ್ಚಾಗಿದೆ. ವಿಶೇಷವಾಗಿ ಹಿಟಾಚಿ ಯಂತ್ರವನ್ನು ಕೇವಲ ನಿರ್ದಿಷ್ಟ ದಿನಗಳಷ್ಟೇ ಬಳಸಲಾಗಿದ್ದರೂ ಅದರ ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಬಿಲ್ ಪಾವತಿ ವಿಚಾರದಲ್ಲಿ ಗ್ರಾಮ ಪಂಚಾಯತ್ ಮತ್ತು ಎಸ್‌ಐಟಿ ನಡುವೆ ಸ್ಪಷ್ಟತೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಒಂದೆಡೆ ಪಂಚಾಯತ್ ಎಸ್‌ಐಟಿಯತ್ತ ಹೊಣೆ ತೋರಿಸುತ್ತಿದ್ದರೆ, ಮತ್ತೊಂದೆಡೆ ಎಸ್‌ಐಟಿ ಬಿಲ್ ಪಾವತಿ ಈಗಾಗಲೇ ನಡೆದಿದೆ ಎಂದು ಹೇಳುತ್ತಿದೆ ಎಂಬ ವಿರೋಧಾಭಾಸದ ಹೇಳಿಕೆಗಳು ಹೊರಬಿದ್ದಿವೆ.
ಇದರಿಂದ ಅಸಮಾಧಾನಗೊಂಡಿರುವ ಕೂಲಿ ಕಾರ್ಮಿಕರು ಮತ್ತು ಯಂತ್ರ ಮಾಲಕರು ತಕ್ಷಣ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.



