ಮಂಗಳೂರು: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸುವ ವಿಚಾರವಾಗಿ ನಡೆದ ಗಲಾಟೆ ಹೈಡ್ರಾಮಾಕ್ಕೆ ತಿರುಗಿದ್ದು, ರಾಜಕೀಯ ಪಕ್ಷವೊಂದರ ಕಾರ್ಯಕರ್ತರ ವಿರುದ್ಧ ಟೋಲ್ ಗೇಟ್‌ನಲ್ಲಿ ಗೂಂಡಾಗಿರಿ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ.
ಸಿಪಿಐಎಂ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ಖಾಸಗಿ ಬಸ್ ಟೋಲ್ ಪ್ಲಾಜಾಗೆ ಆಗಮಿಸಿದಾಗ ಸಿಬ್ಬಂದಿ ಟೋಲ್ ಪಾವತಿಸುವಂತೆ ಸೂಚಿಸಿದ್ದರು. ಆದರೆ ಶುಲ್ಕ ನೀಡಲು ನಿರಾಕರಿಸಿದ ಕಾರ್ಯಕರ್ತರು ಮತ್ತು ಚಾಲಕ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ನೇರವಾಗಿ ಸುರಕ್ಷತಾ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಹಾನಿಗೊಳಿಸಿ ಅಲ್ಲಿಂದ ತೆರಳಿದ್ದಾನೆ. ಇದೇ ವೇಳೆ ಕಾರ್ಯಕರ್ತರಿದ್ದ ಇನ್ನೂ ಹಲವು ವಾಹನಗಳು ಟೋಲ್ ಗೇಟ್ ನಿಯಮಗಳನ್ನು ಉಲ್ಲಂಘಿಸಿ ಬ್ಯಾರಿಯರ್‌ಗಳಿಗೆ ಹಾನಿ ಉಂಟುಮಾಡಿರುವ ಆರೋಪವೂ ಕೇಳಿಬಂದಿದೆ.
ಅಷ್ಟೇ ಅಲ್ಲದೆ, ವಾಹನಗಳು ಒನ್‌ವೇ ಮಾರ್ಗದಲ್ಲೇ ನುಗ್ಗಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದು, ಟೋಲ್ ಸಿಬ್ಬಂದಿಗೆ ಬೆದರಿಕೆ ಒಡ್ಡಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿವೆ ಎಂದು ಮೂಲಗಳು ತಿಳಿಸಿವೆ.
ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಂಪೂರ್ಣ ಘಟನೆ ದಾಖಲಾಗಿದ್ದು, ಬ್ಯಾರಿಯರ್ ಧ್ವಂಸ, ವಾಹನಗಳ ನುಗ್ಗಾಟ ಹಾಗೂ ಸಿಬ್ಬಂದಿಯೊಂದಿಗೆ ನಡೆದ ವಾಗ್ವಾದದ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಿವೆ.



