ಗದಗ: ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ 17 ಲಕ್ಷ ರೂಪಾಯಿ ಸಾಲದ ಹೆಸರಿನಲ್ಲಿ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಗದಗ ತಾಲೂಕಿನ ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರಿಗೆ ಬೆಟಗೇರಿಯ ಬಡ್ಡಿ ದಂಧೆಕೋರರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ರೈತ ಕುಟುಂಬಕ್ಕೆ 17 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಹೇಳಿ, ಮುಂಗಡವಾಗಿಯೇ 5 ಲಕ್ಷ ರೂಪಾಯಿ ಬಡ್ಡಿ ಕಡಿತ ಮಾಡಿಕೊಂಡು ಕೇವಲ 12 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದ್ದರೆಂದು ದೂರಲಾಗಿದೆ.
ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದು, ಕೇವಲ ಅಡಮಾನ (ಹಾಪ್) ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿದ್ದರು. ಆದರೆ ಬಳಿಕ ಅಡಮಾನ ಪತ್ರದ ಬದಲು ಖರೀದಿ ಪತ್ರವೇ ಮಾಡಿಸಿಕೊಂಡು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಆರೋಪ ಕೇಳಿಬಂದಿದೆ.

ಪ್ರಕರಣದಲ್ಲಿ ಶೇಷಗೀರಿಸಾ ಬಾಕಳೆ ಹೆಸರಿಗೆ ಖರೀದಿ ಪತ್ರ ಮಾಡಿಸಲಾಗಿದ್ದು, ಇದರ ಹಿಂದೆ ರೌಡಿ ಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ್ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದೆ.
17 ಲಕ್ಷ ರೂಪಾಯಿ ಸಾಲಕ್ಕೆ ಕೋಟ್ಯಾಂತರ ಮೌಲ್ಯದ 5 ಎಕರೆ ಜಮೀನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ಮೊರೆ ಹೋಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಎಸ್ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ ಹಿನ್ನೆಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಪೊಲೀಸರು ಬಂಧಿಸಿದ್ದು, ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡರ ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲೆಯಲ್ಲಿ ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಬಡ್ಡಿ ಬಕಾಸೂರರ ಕರಾಳ ಮುಖ ಬಯಲಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.



