HomeGadag Newsವಿದ್ಯುತ್ ಗೋಪುರಕ್ಕೆ ಜಮೀನು ಕೊಟ್ಟ ರೈತರಿಗೆ ಅನ್ಯಾಯ!

ವಿದ್ಯುತ್ ಗೋಪುರಕ್ಕೆ ಜಮೀನು ಕೊಟ್ಟ ರೈತರಿಗೆ ಅನ್ಯಾಯ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ: ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಕೃಷಿ ಜಮೀನುಗಳಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ವಿದ್ಯುತ್ ಗೋಪುರಗಳಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಗಣಿಸಿ, ವೈಜ್ಞಾನಿಕ ಹಾಗೂ ನ್ಯಾಯಯುತ ಪರಿಹಾರ ನಿಗದಿಪಡಿಸಬೇಕು ಎಂದು ಡಂಬಳ ಗ್ರಾಮದ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ 2×500 ಎಂವಿಎ 400/220 ಕೆ.ವಿ. ವಿದ್ಯುತ್ ಉಪಕೇಂದ್ರ ಹಾಗೂ ಅದಕ್ಕೆ ಸಂಬಂಧಿಸಿದ 400 ಕೆ.ವಿ. ಮತ್ತು 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಗಳ ಕಾಮಗಾರಿಗೆ ಸಂಬಂಧಿಸಿದಂತೆ ಸಂತ್ರಸ್ತ ರೈತರಿಗೆ ಭೂ ಪರಿಹಾರ ನಿಗದಿಪಡಿಸುವ ಕುರಿತು 2024ರ ಆಗಸ್ಟ್ 16ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ಹಿಂದೆ ವಿದ್ಯುತ್ ಗೋಪುರ ನಿರ್ಮಾಣದಿಂದ ಬಾಧಿತವಾಗುವ ಜಮೀನಿನ ಪ್ರದೇಶಕ್ಕೆ ಪ್ರತಿ ಚದರ ಮೀಟರ್‌ಗೆ ₹2,500 ಹಾಗೂ ವಿದ್ಯುತ್ ತಂತಿ ಹಾದುಹೋಗುವ ಜಾಗಕ್ಕೆ ಪ್ರತಿ ಮೀಟರ್‌ಗೆ ₹20 ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಈ ಮೊತ್ತ ಅವೈಜ್ಞಾನಿಕವಾಗಿದ್ದು, ಡಂಬಳ ಭಾಗದಲ್ಲಿ ಹೆಚ್ಚಿನ ಪ್ರಮಾಣದ ನೀರಾವರಿ ಜಮೀನುಗಳಿರುವುದರಿಂದ ರೈತರಿಗೆ ಆಗುವ ನೈಜ ನಷ್ಟವನ್ನು ಪರಿಗಣಿಸಿ ಪರಿಹಾರ ಪರಿಷ್ಕರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹರಿಹರ ಮಾದರಿಯಲ್ಲಿ ಪರಿಹಾರಕ್ಕೆ ಒತ್ತಾಯ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ರೈತರಿಗೆ ವಿದ್ಯುತ್ ಗೋಪುರಗಳ ಅಡಿಪಾಯಕ್ಕೆ ಬಳಸುವ ಜಾಗಕ್ಕೆ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಅಲ್ಲದೆ ವಿದ್ಯುತ್ ಮಾರ್ಗದ ರಹದಾರಿ ಹಾದುಹೋಗುವ ಜಮೀನಿಗೂ ಪರಿಹಾರ ನೀಡಲಾಗಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಭಾಗದ ರೈತರಿಗೂ ಪರಿಹಾರ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಕೃಷಿ ಚಟುವಟಿಕೆಗೂ ಅಡ್ಡಿ

ವಿದ್ಯುತ್ ಗೋಪುರಗಳು ಜಮೀನಿನಲ್ಲಿ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಹಲವು ರೀತಿಯಲ್ಲಿ ಅಡಚಣೆಯಾಗಲಿದೆ ಎಂದು ರೈತರು ತಿಳಿಸಿದ್ದಾರೆ. ಮರ-ಗಿಡಗಳನ್ನು ಬೆಳೆಸುವುದು, ಕೊಳವೆಬಾವಿ ಕೊರೆಸುವುದು, ಕೃಷಿ ಯಂತ್ರೋಪಕರಣಗಳನ್ನು ಬಳಸುವುದು ಹಾಗೂ ಜಾನುವಾರುಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ.

ಇದಲ್ಲದೆ ವಿದ್ಯುತ್ ಗೋಪುರ ಹಾಗೂ ಪ್ರಸರಣ ಮಾರ್ಗ ಜಮೀನಿನಲ್ಲಿ ಹಾದುಹೋಗುವುದರಿಂದ ಭವಿಷ್ಯದಲ್ಲಿ ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿಯೂ ಸಮಸ್ಯೆ ಎದುರಾಗುವ ಆತಂಕವಿದೆ ಎಂದು ರೈತರು ಹೇಳಿದ್ದಾರೆ.

ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50ರಂತೆ ಪರಿಹಾರ ನಿಗದಿಪಡಿಸಬೇಕು. ಬೆಳೆಹಾನಿ ಹಾಗೂ ವಿದ್ಯುತ್ ಗೋಪುರ ನಿರ್ಮಾಣದಿಂದ ಉಂಟಾಗುವ ಇತರೆ ನಷ್ಟಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ರೈತರ ಜೀವನಾಧಾರವಾಗಿರುವ ಕೃಷಿ ಜಮೀನುಗಳನ್ನು ವಿದ್ಯುತ್ ಯೋಜನೆಗಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರೈತರಿಗೆ ಆಗುವ ವಾಸ್ತವಿಕ ನಷ್ಟವನ್ನು ವೈಜ್ಞಾನಿಕವಾಗಿ ಅಂದಾಜಿಸಿ ನ್ಯಾಯಸಮ್ಮತ ಪರಿಹಾರ ನಿಗದಿಪಡಿಸಬೇಕು. ಪರಿಷ್ಕೃತ ಪರಿಹಾರ ಮೊತ್ತಕ್ಕೆ ಶೀಘ್ರ ಆದೇಶ ಹೊರಡಿಸಿ ಸಂತ್ರಸ್ತ ರೈತರಿಗೆ ಸಕಾಲದಲ್ಲಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

“ದಾವಣಗೆರೆ ಜಿಲ್ಲೆಯಲ್ಲಿ ರೈತರಿಗೆ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಡಂಬಳ ಭಾಗದ ರೈತರಿಗೆ ಕಡಿಮೆ ಪರಿಹಾರ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಮರುಪರಿಶೀಲಿಸಿ ಪ್ರತಿ ಚದರ ಮೀಟರ್‌ಗೆ ₹5 ಸಾವಿರ ಹಾಗೂ ವಿದ್ಯುತ್ ತಂತಿಗೆ ಪ್ರತಿ ಮೀಟರ್‌ಗೆ ₹50 ಪರಿಹಾರ ನಿಗದಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು.”
— ಮಂಜಯ್ಯಸ್ವಾಮಿ ಅರವಠಗಿಮಠ, ಸಾಮಾಜಿಕ ಹೋರಾಟಗಾರ, ಡಂಬಳ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img