ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಇಬ್ಬರೂ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ಈ ಜೋಡಿ, ತಮ್ಮ ವೈಯಕ್ತಿಕ ಜೀವನದ ಅನೇಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಇಬ್ಬರೂ ಡಿಜಿಟಲ್ ದೂರ ಕಾಯ್ದುಕೊಂಡಿರುವುದು ಸಂಬಂಧದಲ್ಲಿ ಬಿಕ್ಕಟ್ಟು ಮೂಡಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸೂರಜ್ ನಂಬಿಯಾರ್ ತಮ್ಮ ಖಾತೆಯಿಂದ ಮದುವೆಯ ಕೆಲವು ಫೋಟೋಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದ್ದು, ಮೌನಿ ರಾಯ್ ಅವರ ಖಾತೆಯಲ್ಲಿ ಮಾತ್ರ ಹಳೆಯ ಚಿತ್ರಗಳು ಇನ್ನೂ ಲಭ್ಯವಿವೆ. ಮೂಲಗಳ ಪ್ರಕಾರ, ಇಬ್ಬರೂ ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿವೆ.
ದುಬೈನಲ್ಲಿ ಉದ್ಯಮಿ ಮತ್ತು ಹೂಡಿಕೆ ಬ್ಯಾಂಕರ್ ಆಗಿರುವ ಸೂರಜ್ ನಂಬಿಯಾರ್ ಮೂಲತಃ ಬೆಂಗಳೂರಿನ ಜೈನ್ ಕುಟುಂಬದವರು. 2022ರಲ್ಲಿ ಗೋವಾದಲ್ಲಿ ಮೌನಿ ರಾಯ್ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದರು. ಮಲಯಾಳಿ ಹಾಗೂ ಬಂಗಾಳಿ ಸಂಪ್ರದಾಯದಂತೆ ನಡೆದಿದ್ದ ಈ ಮದುವೆ ಆ ಸಮಯದಲ್ಲಿ ಭಾರೀ ಸುದ್ದಿಯಾಗಿತ್ತು.
ಆದರೆ ಈ ವಿಚಾರದಲ್ಲಿ ಇದುವರೆಗೆ ದಂಪತಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯ ಮೌನಿ ರಾಯ್ ತಮ್ಮ ಮುಂದಿನ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಅಭಿಮಾನಿಗಳು ಮಾತ್ರ ಈ ಬೆಳವಣಿಗೆಯಿಂದ ಬೇಸರಗೊಂಡಿದ್ದು, ಇದು ಸಣ್ಣ ಮುನಿಸೋ ಅಥವಾ ನಿಜವಾದ ವಿಚ್ಛೇದನದ ಸುಳಿಯೋ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



