ಇಂಡಿಯನ್ ಪ್ರೀಮಿಯರ್ ಲೀಗ್‌ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಶಾಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಅದು ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಕಣಕ್ಕಿಳಿಯುವರಾ ಎಂಬುದು.
ಗಾಯದ ಕಾರಣ ಇಂಗ್ಲೆಂಡ್‌ಗೆ ತೆರಳಿದ್ದ ಫಿಲ್ ಸಾಲ್ಟ್ ಇದೀಗ ಭಾರತಕ್ಕೆ ಮರಳಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಮತ್ತೆ ಆರಂಭಿಕರಾಗಿ ಆಡಲಿದ್ದಾರೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ ಅವರ ಆಡುವುದು ಅನುಮಾನ ಎನ್ನಲಾಗಿದೆ.
ಮಂಗಳವಾರ ನಡೆದ ಆರ್‌ಸಿಬಿ ತಂಡದ ಅಭ್ಯಾಸದಲ್ಲೂ ಫಿಲ್ ಸಾಲ್ಟ್ ಕಾಣಿಸಿಕೊಂಡಿಲ್ಲ. ಅವರ ಬೆರಳಿನ ಗಾಯ ಇನ್ನೂ ಸಂಪೂರ್ಣ ಗುಣಮುಖವಾಗಿಲ್ಲ ಎನ್ನಲಾಗಿದ್ದು, ವೈದ್ಯರು ಇನ್ನೂ ಕೆಲ ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಫಿಲ್ ಸಾಲ್ಟ್ ಹೊರಗುಳಿಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ವಿರಾಟ್ ಕೊಹ್ಲಿ ಜೊತೆ ಯುವ ಎಡಗೈ ಬ್ಯಾಟರ್ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಳೆದ ಪಂದ್ಯದಲ್ಲಿಯೂ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿತ್ತು.



