ಚಿಕ್ಕಬಳ್ಳಾಪುರ: ಕೆಪಿಎಸ್ ಮ್ಯಾಗ್ನೇಟ್ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ನಡೆಯುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ಸಂಘಟನೆ ಹೋರಾಟಕ್ಕೆ ಮುಂದಾಗಿದೆ.
ಸರ್ಕಾರವು ಪಿಎಂ ಶ್ರೀ ಶಾಲೆಗಳ ಜೊತೆಗೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳನ್ನೂ ವಿಲೀನಗೊಳಿಸುತ್ತಿದ್ದು, ಕೆಲವು ಪಿಯು ಕಾಲೇಜುಗಳನ್ನೂ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮವನ್ನು ವಿರೋಧಿಸಿ ಸರ್ಕಾರಿ ಶಾಲೆಗಳ ವಿಲೀನವನ್ನು ತಕ್ಷಣ ನಿಲ್ಲಿಸಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ನೂರಾರು ಶಾಲೆಗಳ ವಿಲೀನ ನಡೆಯುತ್ತಿರುವುದಾಗಿ ತಿಳಿದುಬಂದಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಕೆಪಿಎಸ್ ಮ್ಯಾಗ್ನೇಟ್ ಶಾಲೆಗೆ ದಿಬ್ಬೂರು, ಕತ್ತರಿಗುಪ್ಪೆ, ಮರಳಕುಂಟೆ ಹಾಗೂ ನೆಲ್ಲಿಮರದಹಳ್ಳಿ ಶಾಲೆಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದೇ ರೀತಿ ಉತ್ತಮ ಮೂಲಸೌಕರ್ಯ ಇರುವ ಆಯ್ದ ಶಾಲೆಗಳಿಗೆ ಸುತ್ತಮುತ್ತಲಿನ 5 ರಿಂದ 6 ಕಿ.ಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುವ ಮೂಲಕ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕ್ರಮವು ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ಪ್ರಯತ್ನವಾಗಿದ್ದು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಲಿದೆ ಎಂದು ಆರೋಪಿಸಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



