ಬೆಂಗಳೂರು: ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅವರು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರಬೇಕಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ತೀರ್ಪು ಅವರ ಸಿನಿಮಾ ವೃತ್ತಿಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.
ದರ್ಶನ್ ತಮ್ಮ ಅರ್ಜಿಯಲ್ಲಿ, ತಾವು ವರ್ಷಕ್ಕೆ 2–3 ಸಿನಿಮಾಗಳಲ್ಲಿ ನಟಿಸುತ್ತಿದ್ದೆವು. ಈಗಾಗಲೇ ದೊಡ್ಡ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸುಮಾರು 6 ಕೋಟಿ ರೂ. ಹೂಡಿಕೆ ಆಗಿದೆ ಎಂದು ತಿಳಿಸಿದ್ದಾರೆ. ಆದರೆ ದೀರ್ಘ ಜೈಲುವಾಸವು ತಮ್ಮ ಸಿನಿ ಭವಿಷ್ಯಕ್ಕೆ ಹಾನಿ ಮಾಡುತ್ತಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಆದರೆ ಸುಪ್ರೀಂ ಕೋರ್ಟ್ ಈ ಮನವಿಯನ್ನು ಪರಿಗಣಿಸದೇ, ಸಾಕ್ಷ್ಯ ವಿಚಾರಣೆಗೆ ವೇಗ ನೀಡುವಂತೆ ಸೂಚಿಸಿದೆ. ಪ್ರಕರಣದಲ್ಲಿ 272 ಸಾಕ್ಷಿಗಳಿದ್ದು, ಇದುವರೆಗೆ ಕೇವಲ 10 ಮಂದಿಯ ವಿಚಾರಣೆ ನಡೆದಿರುವುದು ಗಮನ ಸೆಳೆದಿದೆ.
ನ್ಯಾಯಾಲಯದ ಆದೇಶದಂತೆ ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಬೇಕು. ನಂತರವೇ ಜಾಮೀನು ಅರ್ಜಿ ವಿಚಾರಣೆಗೆ ಅವಕಾಶ ಸಿಗಲಿದೆ.
ಈ ಬೆಳವಣಿಗೆಯಿಂದ ದರ್ಶನ್ ನಟನೆಯ ಹೊಸ ಸಿನಿಮಾಗಳು ಕನಿಷ್ಠ 2028ರ ಬಳಿಕ ಮಾತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂಬ ಚರ್ಚೆ ಶುರುವಾಗಿದೆ.



