ಮುಂಬೈ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್‌ನ ಖಾಸಗಿ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.
ಲಾತೂರ್‌ನಲ್ಲಿರುವ ರೇಣುಕೈ ರಸಾಯನಶಾಸ್ತ್ರ ತರಗತಿಗಳ ಸಂಸ್ಥಾಪಕರಾದ ಶಿವರಾಜ್ ಮೋಟೆಗಾಂವ್ಕರ್ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಭಾನುವಾರ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆ ವೇಳೆ ಅವರ ಮೊಬೈಲ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪತ್ತೆಯಾದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಪ್ರಕಾರ, ಮೋಟೆಗಾಂವ್ಕರ್ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರಸರಣದಲ್ಲಿ ತೊಡಗಿದ್ದ ಸಂಘಟಿತ ಜಾಲದ ಸಕ್ರಿಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳೊಂದಿಗೆ ಸೇರಿ 2026ರ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಏಪ್ರಿಲ್ 23ರಂದು ಪರೀಕ್ಷೆಗೆ ಮುನ್ನವೇ ಪಡೆದು ಹಲವು ಮಂದಿಗೆ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಶಿವರಾಜ್ ರಘುನಾಥ್ ನಡೆಸುತ್ತಿದ್ದ ತರಬೇತಿ ಕೇಂದ್ರವು ಲಾತೂರ್‌ನ ಮುಖ್ಯ ಶಾಖೆಯೊಂದಿಗೆ ಒಟ್ಟು ಒಂಬತ್ತು ಶಾಖೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದೆ. ಪ್ರಕರಣದಲ್ಲಿ ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಹಾಗೂ ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.
ಶಿವರಾಜ್ ಬಂಧನಕ್ಕೂ ಮುನ್ನ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಮನೀಶಾ ಮಾಂಧರೆ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಈ ಇಬ್ಬರೂ ಮನೀಶಾ ವಾಘ್ಮಾರೆ ಎಂಬ ಮಹಿಳೆಯ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೀಶಾ ವಾಘ್ಮಾರೆ ಕೂಡ ಸಿಬಿಐ ವಶದಲ್ಲಿದ್ದಾರೆ.



