ಬೆಂಗಳೂರು: ಕೆಪಿಎಸ್ಸಿಯ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸದಸ್ಯೆ ಶಾಂತ ಹೊಸಮನಿ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪ್ರಕರಣದಲ್ಲಿ ಶಾಂತ ಹೊಸಮನಿ ಅವರು ಎರಡನೇ ಆರೋಪಿ ಎಂದು ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ವಾದಿಸಿದರು. ಅಭ್ಯರ್ಥಿಗಳಿಗೆ ಅಂಕ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಕೆಪಿಎಸ್ಸಿ ಪರ ವಕೀಲೆ ಎಂ.ಆರ್. ಸಿಂಚನಾ ವಾದ ಮಂಡಿಸಿ, ಸಹಾಯಕ ಕಾರ್ಯದರ್ಶಿ ನೀಡಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯನ್ನು ತನಿಖಾಧಿಕಾರಿಗೆ ನೀಡಲಾಗಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದಾಗ, ನೀಡಲಾಗಿಲ್ಲ ಎಂದು ಕೆಪಿಎಸ್ಸಿ ಪರ ವಕೀಲೆ ಉತ್ತರಿಸಿದರು.
ಈ ವೇಳೆ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಸ್ತೃತ ವಿಚಾರಣೆ ನಡೆಯಿತು. 2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿತ್ತು ಎಂದು ಶಾಂತ ಹೊಸಮನಿ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದರು. ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಬಹುದಾದರೂ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು ಎಂಬ ಆದೇಶವಿದೆ ಎಂದು ಅವರು ವಾದಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಬೆಳಗ್ಗೆ 5 ಅಭ್ಯರ್ಥಿಗಳು ಹಾಗೂ ಸಂಜೆ 4 ಅಭ್ಯರ್ಥಿಗಳ ಸಂದರ್ಶನ ನಡೆದಿತ್ತು. ಕೆಪಿಎಸ್ಸಿಯ ಮೂವರು ಸದಸ್ಯರು ಸಂದರ್ಶನ ನಡೆಸಿದ್ದರು. ಸಂದರ್ಶನಕ್ಕೆ ಹಾಜರಾದ ಎಲ್ಲಾ 9 ಅಭ್ಯರ್ಥಿಗಳಿಗೆ ನೀಡಲಾದ ಅಂಕಗಳನ್ನು ಪರಿಶೀಲಿಸುವಂತೆ ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು.
2026ರ ಮೇ 8ರಂದು ನಡೆದ ಸಂದರ್ಶನದಲ್ಲಿ ಶಾಂತ ಹೊಸಮನಿ ಅವರಿಗೆ ನೀಡಲಾದ ಅಂಕಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಯಿತು. ಬಳಿಕ ಎಲ್ಲಾ 9 ಅಭ್ಯರ್ಥಿಗಳಿಗೆ ನೀಡಲಾದ ಅಂಕಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೆಪಿಎಸ್ಸಿ ನಿರ್ದೇಶಕರಿಗೆ ಪೀಠ ಸೂಚನೆ ನೀಡಿತು.
ಪ್ರಕರಣದ ಹಿನ್ನೆಲೆ, ಅಭ್ಯರ್ಥಿಗಳೊಂದಿಗೆ ನಡೆದ ಸಂಪರ್ಕ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಶಾಂತ ಹೊಸಮನಿ ಅವರು ಸಂದರ್ಶನಕ್ಕೆ ಮುನ್ನ ಒಬ್ಬ ಅಭ್ಯರ್ಥಿಯೊಂದಿಗೆ 13 ಬಾರಿ ದೂರವಾಣಿ ಸಂಪರ್ಕ ಹೊಂದಿದ್ದರು ಎಂಬ ಅಂಶವನ್ನೂ ತನಿಖಾ ಸಂಸ್ಥೆ ನ್ಯಾಯಾಲಯದ ಗಮನಕ್ಕೆ ತಂದಿತ್ತು. ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.



