ಕಾರವಾರ: ಮಳೆಗಾಲ ಆರಂಭ ಮತ್ತು ಹವಾಮಾನ ವೈಪರಿತ್ಯದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರ ಹಾಗೂ ನದಿಪ್ರದೇಶಗಳಲ್ಲಿ ನಡೆಯುತ್ತಿದ್ದ ಜಲಸಾಹಸ ಕ್ರೀಡೆಗಳಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿಷೇಧ ಹೇರಿದೆ.
ಜಲಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಹೊರಡಿಸಿರುವ ಆದೇಶದಂತೆ, ಮೇ 19ರಿಂದ ಮಳೆಗಾಲ ಮುಗಿಯುವವರೆಗೆ ಅರಬ್ಬಿ ಸಮುದ್ರ, ಶರಾವತಿ ಹಿನ್ನೀರು ಮತ್ತು ಅಘನಾಶಿನಿ ನದಿಯಲ್ಲಿ ಯಾವುದೇ ಜಲಕ್ರೀಡೆ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ.
ಗೋಕರ್ಣ ಮುಖ್ಯ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಹಾಫ್ಮೂನ್ ಬೀಚ್, ಪ್ಯಾರಡೈಸ್ ಬೀಚ್, ಮುರುಡೇಶ್ವರ ಹಾಗೂ ಕಾರವಾರ ಬೀಚ್ಗಳಲ್ಲಿ ನಡೆಯುತ್ತಿದ್ದ ಬೋಟಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತ್ತಿದ್ದ ಸ್ಕೂಬಾ ಡೈವಿಂಗ್ ಚಟುವಟಿಕೆಗೂ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ತದಡಿ ಅಘನಾಶಿನಿ ನದಿ ತೀರ ಹಾಗೂ ಶರಾವತಿ ಹಿನ್ನೀರಿನ ಪ್ರವಾಸಿ ಬೋಟಿಂಗ್ ಸೇವೆಯನ್ನೂ ನಿಲ್ಲಿಸಲಾಗಿದೆ.
ಹವಾಮಾನ ಇಲಾಖೆ ಚಂಡಮಾರುತ ಮತ್ತು ಬಿರುಗಾಳಿ ಬಗ್ಗೆ ಮುನ್ಸೂಚನೆ ನೀಡಿರುವ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಅಪ್ಸರಕೊಂಡ ಕಡಲ ತೀರದಲ್ಲಿ ಪ್ರೀ-ವೆಡ್ಡಿಂಗ್ ಸೆಟ್ ಅಳವಡಿಕೆಗೂ ಅವಕಾಶ ನೀಡಿಲ್ಲ.



