ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಭಾರೀ ಅಕ್ರಮ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂಬಂಧಿಸಿದ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ದೂರುಗಳ ಪ್ರಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ 600 ಕುಟುಂಬಗಳಿಗೆ ಮನೆ ನಿರ್ಮಿಸಬೇಕಾಗಿದ್ದರೂ ಯೋಜನೆ ಪೂರ್ಣಗೊಳಿಸದೇ ಸುಮಾರು ₹33 ಕೋಟಿ ಅನುದಾನದಲ್ಲಿ ₹23 ಕೋಟಿ ರೂಪಾಯಿ ಅಕ್ರಮವಾಗಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಶಾಂತ್ ದೇಸಾಯಿ ನೇತೃತ್ವದಲ್ಲಿ ಬೆಂಗಳೂರು, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.
ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬಿಲ್ಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹23 ಕೋಟಿ ರೂಪಾಯಿ ಅನಧಿಕೃತ ಬಿಲ್ಗಳ ಬಗ್ಗೆ ಲೋಕಾಯುಕ್ತ ತಂಡಗಳು ಪರಿಶೀಲನೆ ಮುಂದುವರಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆಯ ನಿವೃತ್ತ ಎಇಇ ಶಂಭುಲಿಂಗಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಮಾಣಿ, NTCC ಮ್ಯಾನೇಜರ್ ಎನ್. ಪ್ರಸಾದ್ ಹಾಗೂ ವಿಜಯಪುರ ಗುತ್ತಿಗೆದಾರ ಗಿರಮಲಪ್ಪ ಜೋಗೂರ ವಿರುದ್ಧ ಪ್ರಕರಣ ದಾಖಲಾಗಿದೆ.



