ಬೆಂಗಳೂರು: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ ಇನ್ಮುಂದೆ ಕೇವಲ ಸಾರಿಗೆ ಸೇವೆಗೆ ಸೀಮಿತವಾಗದೆ, ವಾಣಿಜ್ಯ ಆದಾಯ ಹೆಚ್ಚಿಸುವತ್ತ ದೊಡ್ಡ ಹೆಜ್ಜೆ ಇಡುತ್ತಿದೆ.
ಟಿಕೆಟ್ ಆದಾಯದ ಜೊತೆಗೆ ನಾನ್-ಫೇರ್ ಬಾಕ್ಸ್ ರೆವಿನ್ಯೂ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ಪಿಲ್ಲರ್‌ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಬಳಸಲು ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿರುವ ಮೆಟ್ರೋ ಪಿಲ್ಲರ್‌ಗಳ ಮೇಲೆ ಜಾಹೀರಾತು ಅಳವಡಿಸಲು ಬಿಎಂಆರ್‌ಸಿಎಲ್ ಮೆಗಾ ಟೆಂಡರ್ ಆಹ್ವಾನಿಸಿದ್ದು, ಈ ನಿರ್ಧಾರ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ವಾಹನ ಸವಾರರ ಗಮನ ಭಂಗವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಸಾರ್ವಜನಿಕರಾದ ವೀರೇಶ್, “ಮೆಟ್ರೋ ಸಂಸ್ಥೆ ಹಣ ಗಳಿಸುವ ಉದ್ದೇಶದಿಂದ ನಗರದ ಸೌಂದರ್ಯ ಹಾಳು ಮಾಡಲು ಹೊರಟಿದೆ. ವಿಶೇಷವಾಗಿ ರಾತ್ರಿ ವೇಳೆ ಪ್ರಕಾಶಮಾನವಾದ ಡಿಜಿಟಲ್ ಬೋರ್ಡ್‌ಗಳಿಂದ ವಾಹನ ಚಾಲನೆ ಕಷ್ಟವಾಗಬಹುದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಈ ಆರೋಪಗಳನ್ನು ಬಿಎಂಆರ್‌ಸಿಎಲ್ ತಳ್ಳಿಹಾಕಿದೆ. ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್ ಮಾತನಾಡಿ, “ವಿಶ್ವದರ್ಜೆಯ ಸಂಘಟಿತ ಜಾಹೀರಾತು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಾವಳಿಗಳ ಅನ್ವಯವೇ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಆರ್ಥಿಕವಾಗಿ ಸ್ವಾವಲಂಬಿಯಾಗಲು ಮೆಟ್ರೋ ಸಂಸ್ಥೆ ಇಟ್ಟಿರುವ ಈ ಹೆಜ್ಜೆ ಒಂದು ಕಡೆ ಮೆಚ್ಚುಗೆಗೆ ಪಾತ್ರವಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಸುರಕ್ಷತೆ ಮತ್ತು ನಗರದ ಸೌಂದರ್ಯ ಕಾಪಾಡುವ ಸವಾಲು ಕೂಡ ಎದುರಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.



