ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಮೆಡಿಕಲ್ ಶಾಪ್ಗಳು ಬಂದ್ ಆಗಲಿವೆ.
ಆನ್ಲೈನ್ ಇ-ಫಾರ್ಮಸಿ ಹಾಗೂ ಕ್ವಿಕ್ ಕಾಮರ್ಸ್ ಆ್ಯಪ್ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಪ್ರತಿಭಟನೆಗೆ ಕರೆ ನೀಡಿದೆ.
ಈ ಬಂದ್ಗೆ ಕರ್ನಾಟಕ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಬೆಂಬಲ ನೀಡಿದ್ದು, ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ಗಳು ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್ ಆಗಲಿವೆ. ಬೆಂಗಳೂರು ಒಂದರಲ್ಲೇ ಮೂರು ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಅಂಗಡಿಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಇನ್ನೊಂದೆಡೆ, ಬೆಂಗಳೂರು ಫಾರ್ಮ್ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಫೋರಂನಿಂದ ಹೊರಬಂದ ಕೆಲ ಸದಸ್ಯರು ಪ್ರತ್ಯೇಕ ಸಂಘ ರಚಿಸಿ ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಹೆಚ್ಚಿನ ಮೆಡಿಕಲ್ ಮಾಲೀಕರು ಬಂದ್ಗೆ ಬೆಂಬಲ ನೀಡಿ ಅಂಗಡಿಗಳನ್ನು ಮುಚ್ಚಿದ್ದಾರೆ.
ಬಂದ್ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಳಗೆ ಕಾರ್ಯನಿರ್ವಹಿಸುವ ಫಾರ್ಮಸಿಗಳು ಎಂದಿನಂತೆ ತೆರೆದಿರಲಿವೆ. ತುರ್ತು ಸಂದರ್ಭಗಳಲ್ಲಿ ಅಗತ್ಯ ಔಷಧಿ ಪೂರೈಕೆಗಾಗಿ ಆಯ್ದ ಕೇಂದ್ರಗಳಲ್ಲಿ ಎಮರ್ಜೆನ್ಸಿ ಕೌಂಟರ್ಗಳನ್ನು ತೆರೆಯಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ತುರ್ತು ವೈದ್ಯಕೀಯ ಅವಶ್ಯಕತೆ ಇರುವವರು ಆಸ್ಪತ್ರೆಗಳ ಫಾರ್ಮಸಿಗಳ ಸೇವೆಯನ್ನು ಪಡೆಯಬಹುದಾಗಿದೆ.



